ನವದೆಹಲಿ: ನಾಟಕೀಯ ಘಟನೆಯೊಂದರಲ್ಲಿ, ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಕಲುಷಿತ ಯಮುನಾ ನದಿಯಲ್ಲಿ ಮುಳುಗಿ ಪ್ರತಿಭಟಿಸಿದ್ದ ಕೆಲವೇ ದಿನಗಳಲ್ಲಿ ರಾಮ್ ಮನೋಹರ್ ಲೋಹಿಯಾ(ಆರ್‌ಎಂಎಲ್) ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೆಹಲಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನಾರ್ಥವಾಗಿ ಎರಡು ದಿನಗಳ ಹಿಂದೆ ಯಮುನಾ ನದಿಯಲ್ಲಿ ಮುಳುಗೆದ್ದಿದ್ದ ವೀರೇಂದ್ರ ಸಚ್‌ದೇವ ಅವರಿಗೆ ಉಸಿರಾಟದ ತೊಂದರೆ ಹಾಗೂ ತೀವ್ರವಾದ ಚರ್ಮ ತುರಿಕೆ ಆರಂಭವಾಗಿದೆ. ಹೀಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಮಾತನಾಡಿ, ಸಚ್‌ದೇವ ಅವರು ತೀವ್ರ ತುರಿಕೆ ಸಮಸ್ಯೆಯಿಂದ ಆಸ್ಪತ್ರೆಯ ಚರ್ಮರೋಗ ವಿಭಾಗಕ್ಕೆ ದಾಖಲಾಗಿದ್ದಾರೆ. ಅವರಿಗೆ ಉಸಿರಾಟದ ತೊಂದರೆಯು ಇದೆ ಎಂದು ಹೇಳಿದ್ದಾರೆ.
“ವೀರೇಂದ್ರ ಸಚ್‌ದೇವ ಆರೋಗ್ಯ ಈಗ ಸ್ಥಿರವಾಗಿದೆ, ಅವರಿಗೆ ಈ ಹಿಂದೆ ಚರ್ಮ ತುರಿಕೆ ಅಥವಾ ಉಸಿರಾಟದ ಸಮಸ್ಯೆ ಇರಲಿಲ್ಲ” ಎಂದು ಪ್ರವೀಣ್ ಶಂಕರ್ ಕಪೂರ್ ಹೇಳಿದ್ದಾರೆ.
ಯಮುನಾ ನದಿ ಶುದ್ಧೀಕರಣಕ್ಕೆ ಕೇಂದ್ರ ಸರ್ಕಾರ ಒದಗಿಸಿದ್ದ 8,500 ಕೋಟಿ ರೂಪಾಯಿ ಅನ್ನು ಆಪ್ ಸರ್ಕಾರ ದುರಪಯೋಗಪಡಿಸಿಕೊಂಡಿದ್ದು, ಆ ಮೊತ್ತಕ್ಕೆ ದೆಹಲಿ ಸರ್ಕಾರ ಲೆಕ್ಕ ನೀಡಬೇಕು ಎಂದು ಸಚ್‌ದೇವ ಆಗ್ರಹಿಸಿದ್ದರು.