ಪಂಜಾಬ್-ಹರಿಯಾಣ ಗಡಿಯಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮೂವರು ಕೇಂದ್ರ ಸಚಿವರು ಚಂಡೀಗಢದಲ್ಲಿ ಮತ್ತೊಂದು ಸುತ್ತಿನ ಮಾತುಕತೆಗಾಗಿ ರೈತ ಮುಖಂಡರನ್ನು ಭೇಟಿಯಾಗಲಿದ್ದಾರೆ.
ಮೊನ್ನೆ ಮಂಗಳವಾರ ಬೆಳಗ್ಗೆ ಪಂಜಾಬ್‌ನ ರೈತರು ರಾಷ್ಟ್ರ ರಾಜಧಾನಿ ಕಡೆಗೆ ತಮ್ಮ ‘ದೆಹಲಿ ಚಲೋ’ ಮೆರವಣಿಗೆಯನ್ನು ಪ್ರಾರಂಭಿಸಿದಾಗಿನಿಂದ, ಭದ್ರತಾ ಸಿಬ್ಬಂದಿ ತಡೆದ ಕಾರಣ ಘರ್ಷಣೆಯುಂಟಾಗಿ ರೈತರು ಗಾಯಗೊಂಡಿದ್ದಾರೆ.
ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(Minimum Supporting Price) ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಪ್ರತಿಭಟನಾ ದೆಹಲಿ ಚಲೋ ಮೆರವಣಿಗೆಯನ್ನು ಮುನ್ನಡೆಸುತ್ತಿವೆ.
ಶಂಭು ಗಡಿಯಲ್ಲಿರುವ ರೈತರು, ತಮ್ಮ ಟ್ರ್ಯಾಕ್ಟರ್-ಟ್ರಾಲಿಗಳಲ್ಲಿ ರಸ್ತೆಯುದ್ದಕ್ಕೂ ಸಾಲುಗಟ್ಟಿ ಪಂಜಾಬ್‌ನ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದಾರೆ, ಅವರು ತಮ್ಮ ಗಮ್ಯಸ್ಥಾನವಾದ ದೆಹಲಿಯಿಂದ ಇನ್ನೂ 200 ಕಿಮೀ ದೂರದಲ್ಲಿದ್ದಾರೆ.