ಉಡುಪಿ | ಸಂಪೂರ್ಣ ಹಾನಿಯಾದ ಮನೆಗೆ 5 ಲಕ್ಷ ಪರಿಹಾರಕ್ಕೆ ಆಗ್ರಹ : ಯಶ್ ಪಾಲ್ ಸುವರ್ಣ

ಕರ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರ್ಪಾಡಿ ಭಾಗದಲ್ಲಿ ಭಾರೀ ಗಾಳಿ ಹಾಗೂ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ರವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳದಲ್ಲಿ ಉಪಸ್ಥಿತರಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಹಾನಿಗೀಡಾದ ಮನೆ ಹಾಗೂ ತೋಟ ಹಾಗೂ ಕೃಷಿ ಬೆಳೆ ಹಾನಿಯ ಬಗ್ಗೆ ವರದಿ ನೀಡಿ ಗರಿಷ್ಠ ಪರಿಹಾರಕ್ಕೆ ಶಿಫಾರಸ್ಸು ಮಾಡುವಂತೆ ಸೂಚನೆ ನೀಡಿದರು.

ಸಂಪೂರ್ಣ ಹಾನಿಯಾದ ಮನೆಗಳ ಮರು ನಿರ್ಮಾಣಕ್ಕೆ ಈ ಹಿಂದೆ ರಾಜ್ಯ ಸರ್ಕಾರ ನೀಡುತ್ತಿದ್ದ ರೂ. 5 ಲಕ್ಷ ಪರಿಹಾರವನ್ನು 1.50 ಲಕ್ಷಕ್ಕೆ ಕಡಿತಗೊಳಿಸಿದ್ದು, ಸರ್ಕಾರ ಈ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಹಾಗೂ ತುರ್ತು ಸಂದರ್ಭದಲ್ಲಿ 25 ಸಾವಿರ ಸ್ಥಳದಲ್ಲಿಯೇ ವಿತರಣೆ ಮಾಡುವಂತೆ ಆಗ್ರಹಿಸುವುದಾಗಿ ಹೇಳಿದರು.

ಘಟನೆ ಸಂಭವಿಸಿದ ಕೂಡಲೇ ಶಾಸಕರ ಸೂಚನೆ ಮೇರೆಗೆ ರಾತ್ರೋರಾತ್ರಿ ತಕ್ಷಣ ಪರಿಹಾರ ಕಾರ್ಯಾಚರಣೆಯಲ್ಲಿ ಸಹಕರಿಸಿದ ಕಂದಾಯ, ಅರಣ್ಯ ಅಗ್ನಿಶಾಮಕ, ಮೆಸ್ಕಾಂ, ಪೊಲೀಸ್ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಇನಕರ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ಸೌಮ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿರಾಜ್, ಬಿಜೆಪಿ ಮಂಡಲ ಅಧ್ಯಕ್ಷರಾದ ರಾಜೀವ್ ಕುಲಾಲ್, ಕಾರ್ಯದರ್ಶಿ ನವೀನ್ ಪುತ್ರನ್, ಪಕ್ಷದ ಪ್ರಮುಖರಾದ ಆದರ್ಶ ಶೆಟ್ಟಿ ಕೆಂಜೂರು, ವಿನುತ್ ಶೆಟ್ಟಿ, ಸುಧಾಕರ ಸುವರ್ಣ, ರಘು ನಾಯ್ಕ್, ಉಪೇಂದ್ರ, ಆಶಾ, ಅಕ್ಷಯ್, ಮಣಿಕಂಠ ಮೊದಲಾದವರು ಉಪಸ್ಥಿತರಿದ್ದರು.

Latest Indian news

Popular Stories