ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ದ ರೈತರು ಪಂಜಾಬ್‌ನ ವಿವಿಧ ಭಾಗಗಳಿಂದ ತಮ್ಮ ಪ್ರಯಾಣವನ್ನು ಆರಂಭಿಸಲಿದ್ದು ಸೋಮವಾರ ಮಧ್ಯಾಹ್ನ ಫತೇಘರ್ ಸಾಹಿಬ್‌ನಲ್ಲಿ ಸೇರಲಿದ್ದಾರೆ.
KMM ನ ಸಂಯೋಜಕ ಸರ್ವಾನ್ ಸಿಂಗ್ ಪಂಧೇರ್ ಮಾತನಾಡಿ, ಪಂಜಾಬ್‌ನ ವಿವಿಧ ಭಾಗಗಳಿಂದ ಸಾವಿರಾರು ಟ್ರ್ಯಾಕ್ಟರ್‌ಗಳು ಸೋಮವಾರ ಮಧ್ಯಾಹ್ನದ ವೇಳೆಗೆ ಮಾರ್ಗವನ್ನು ತಲುಪುತ್ತವೆ. ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ರಸ್ತೆಬದಿಗಳಲ್ಲಿ ರಾತ್ರಿಯಿಡೀ ಮಲಗುತ್ತಾರೆ. ಮಾತುಕತೆಯ ಫಲಿತಾಂಶದ ಆಧಾರದ ಮೇಲೆ ದೆಹಲಿಯತ್ತ ಸಾಗುತ್ತಾರೆ ಎಂದು ಹೇಳಿದ್ದಾರೆ.
ಪಂಜಾಬ್‌ನಿಂದ ಸಾವಿರಾರು ಟ್ರ್ಯಾಕ್ಟರ್ ಗಳು ಬರಲಿವೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ 1000 ಟ್ರಾಕ್ಟರ್‌ಗಳು ಬರುತ್ತಿವೆ ಎಂದು ಹೇಳಿದ್ದಾರೆ.
ಚಂಡೀಗಢದಲ್ಲಿ ಸೋಮವಾರ ಸಂಜೆ 5 ಗಂಟೆಗೆ ನಡೆಯುವ ಎರಡನೇ ಸುತ್ತಿನ ಸಭೆಗೆ ಕೇಂದ್ರ ಸರ್ಕಾರವು ಸರ್ವಾನ್ ಸಿಂಗ್ ಪಂಧೇರ್ ಮತ್ತು ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ ಸಿಧುಪುರ್) ಅಧ್ಯಕ್ಷ ಜಗಜಿತ್ ಸಿಂಗ್ ದಲ್ಲೆವಾಲ್ ಅವರಿಗೆ ನೇರ ಆಹ್ವಾನ ನೀಡಿದೆ .
ಸಭೆಯಲ್ಲಿ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಭಾಗವಹಿಸಲಿದ್ದಾರೆ .
ಎಸ್‌ಕೆಎಂ (ರಾಜಕೀಯೇತರ) ಮತ್ತು ಕೆಎಂಎಂನಿಂದ ತಲಾ 13 ಮಂದಿಯಂತೆ ಒಟ್ಟು 26 ಜನರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಗಜಿತ್ ಸಿಂಗ್ ದಲ್ಲೆವಾಲ್ ಹೇಳಿದ್ದಾರೆ.
ಪಂಧೇರ್ ಅವರು, “ನಾವು ತುಂಬಾ ಶಾಂತಿಯುತವಾಗಿದ್ದೇವೆ ಮತ್ತು ನಮ್ಮ ರೈತರಿಗೆ ಶಾಂತಿಯುತವಾಗಿರಲು ಮನವಿ ಮಾಡುತ್ತೇವೆ. ಆದಾಗ್ಯೂ, ಹರಿಯಾಣ ಸರ್ಕಾರದ ಚಟುವಟಿಕೆಗಳು ರೈತರನ್ನು ಕೆರಳಿಸುತ್ತಿವೆ ಮತ್ತು ಪ್ರಚೋದಿಸುತ್ತಿವೆ” ಎಂದು ಹೇಳಿದ್ದಾರೆ.