Featured StoryNational

ತಡಬೇಡ, ಮದುವೆಯಾದ ಕೂಡಲೇ ಮಕ್ಕಳು ಮಾಡಿಕೊಳ್ಳಿ- ಚಂದದ ತಮಿಳು ಹೆಸರಿಡಿ: ನವ ವಿವಾಹಿತರಿಗೆ ಸ್ಟಾಲಿನ್‌ ಸಲಹೆ

ಚೆನ್ನೈ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತು ಚರ್ಚೆಗಳು ಜೋರಾಗುತ್ತಿರುವ ನಡುವೆಯೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ನವವಿವಾಹಿತರಿಗೆ ಮದುವೆಯಾದ ತಕ್ಷಣವೇ ತಡಮಾಡದೇ ಮಕ್ಕಳನ್ನು ಹೆರುವಂತೆ ಸಲಹೆ ನೀಡಿದ್ದಾರೆ.

ಸೋಮವಾರ ಪಕ್ಷದ ಮುಖಂಡರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಸ್ಟಾಲಿನ್‌, ತಮಿಳುನಾಡಿನ ಮೇಲೆ ಕತ್ತಿ ನೇತಾಡುತ್ತಿದೆ, ಹೆಚ್ಚು ಮಕ್ಕಳನ್ನು ಹೊಂದದಿದ್ದರೆ ರಾಜ್ಯವು ಗಂಭೀರ ರಾಜಕೀಯ ನಷ್ಟವನ್ನು ಅನುಭವಿಸುತ್ತದೆ ಎಂದು ತಮಿಳು ಜನರಿಗೆ ಎಚ್ಚರಿಸಿದರು.

ಈ ಹಿಂದೆ ನವವಿವಾಹಿತರಿಗೆ ಕುಟುಂಬ ಯೋಜನೆ ಅನುಸರಿಸಲು ಮೊದಲು ಸಮಯ ತೆಗೆದುಕೊಳ್ಳುವಂತೆ ಕೇಳುತ್ತಿದ್ದೆ, ಆದರೀಗ ಈಗ ಹಾಗೆ ಮಾಡುವುದಿಲ್ಲ. ಈಗ ಕೇಂದ್ರ ಸರ್ಕಾರವು ಜಾರಿಗೆ ತರಲು ಯೋಜಿಸುತ್ತಿರುವ ಗಡಿ ನಿರ್ಣಯದಂತಹ ನೀತಿಯಿಂದಾಗಿ ನಾನು ಹಾಗೆ ಹೇಳಲು ಸಾಧ್ಯವಿಲ್ಲ. ನಾವು ಕುಟುಂಬ ಯೋಜನೆಯತ್ತ ಗಮನಹರಿಸಿದ್ದೇವೆ ಮತ್ತು ಯಶಸ್ವಿಯಾಗಿದ್ದೇವೆ.

ಅದರಿಂದಲೇ ಇಂತಹ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದೇವೆ. ಆದ್ದರಿಂದ ನಾನು ಈಗ ನವವಿವಾಹಿತರನ್ನು ತಕ್ಷಣವೇ ಮಕ್ಕಳನ್ನು ಹೆತ್ತು ಅವರಿಗೆ ಒಳ್ಳೆಯ ತಮಿಳು ಹೆಸರನ್ನು ಇಡುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಹಿಂದೆ ಕುಟುಂಬ ನಿಯಂತ್ರಣ ಕಾಯ್ದೆ ತಂದಾಗ, ನಾವು ಪರಿಪೂರ್ಣವಾಗಿ ಅದನ್ನು ಜಾರಿ ಮಾಡಿದೆವು. ಅದರ ಪರಿಣಾಮ ಈಗ ಲೋಕಸಭೆಯಲ್ಲಿ ರಾಜ್ಯದ ಪ್ರಾತಿನಿಧ್ಯ ಕಡಿತಗೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಜನರು ತಡಮಾಡದೆ ಹೆಚ್ಚು ಮಕ್ಕಳನ್ನು ಪಡೆಯಿರಿ ಎಂದು ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರ ಲೋಕಸಭಾ ಸ್ಥಾನಗಳ ಪುನರ್ವಿಂಗಡಣೆ ಮಾಡಿದ ಹಿನ್ನೆಲೆಯಲ್ಲಿ ಸ್ಟಾಲಿನ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಪುನರ್ವಿಂಗಡಣೆ ಮಾಡಲು ಯೋಜಿಸುತ್ತಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಿಂದ ತಮಿಳುನಾಡಿನಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ತಮಿಳುನಾಡು ರಾಜಕೀಯ ಮಹತ್ವವನ್ನು ಕಳೆದುಕೊಳ್ಳುತ್ತದೆ ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಕೂಡಾ ತಮಿಳಿನ ನಾಣ್ಣುಡಿಯಂತೆ ಪ್ರತಿ ದಂಪತಿ 16 ಮಕ್ಕಳನ್ನು ಹೆರಬೇಕು ಎಂದು ಸ್ಟಾಲಿನ್‌ ಸಲಹೆ ನೀಡಿದ್ದರು.

Related Articles

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button