ಬಿಜೆಪಿ ಗಾಳಕ್ಕೆ ಬೀಳಬೇಡಿ, ಆರ್‌ಎಸ್‌ಎಸ್ ಗರ್ಭಗುಡಿಗೆ ಶೂದ್ರರು ಮತ್ತು ಮಹಿಳೆಯರಿಗೆ ಪ್ರವೇಶವಿಲ್ಲ: ಸಿದ್ದರಾಮಯ್ಯ

ಮೈಸೂರು: ಆರ್‌ಎಸ್‌ಎಸ್ ಗರ್ಭಗುಡಿಗೆ ಶೂದ್ರರು ಮತ್ತು ಮಹಿಳೆಯರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಮತ್ತು ಬಿಜೆಪಿ-ಆರ್‌ಎಸ್‌ಎಸ್ ನೀಡುತ್ತಿರುವ ಸುಳ್ಳು ಆಶ್ವಾಸನೆಗಳ ಗಾಳಕ್ಕೆ ಜನರು ಬೀಳಬಾರದು. ಎರಡು ಸಂಘಟನೆಗಳು ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದು, ಮೀಸಲಾತಿಯನ್ನು ವಿರೋಧಿಸುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಆರೋಪಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಎಸ್‌ಸಿ/ಎಸ್‌ಟಿ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಜನರು ಬಿಜೆಪಿ-ಆರ್‌ಎಸ್‌ಎಸ್‌ ಗಾಳಕ್ಕೆ ಬೀಳಬಾರದು. ಆರ್‌ಎಸ್‌ಎಸ್ ಗರ್ಭಗುಡಿಗೆ ಶೂದ್ರರು-ದಲಿತರು ಮತ್ತು ಮಹಿಳೆಯರಿಗೆ ಪ್ರವೇಶವಿಲ್ಲ’ ಎಂದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಪರ ಮತಯಾಚಿಸಲು ಸಭೆಯನ್ನು ಆಯೋಜಿಸಲಾಗಿತ್ತು.

ಬಿಜೆಪಿ ಮತ್ತು ಆರೆಸ್ಸೆಸ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿವೆ. ಹೀಗಾಗಿ ಅವರಿಗೆ ಮೀಸಲಾತಿ ಇಷ್ಟವಿಲ್ಲ. ಮೀಸಲಾತಿ ಭಿಕ್ಷೆಯಲ್ಲ, ಶೋಷಿತ ಸಮುದಾಯಗಳ ಹಕ್ಕು. ನನ್ನ ಪ್ರಕಾರ ಸಮಾಜದಲ್ಲಿ ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಇರಬೇಕು ಎಂದು ತಿಳಿಸಿದರು.

ಸ್ವಾತಂತ್ರ್ಯ ಮತ್ತು ಬ್ರಿಟಿಷರ ಕಾಲದ ಮೊದಲು, ಶೂದ್ರರಾದ ನಮಗೆ ಅಧ್ಯಯನ ಮಾಡುವ ಹಕ್ಕನ್ನು ನೀಡಲಾಗಿತ್ತೇ? ಮಹಿಳೆಯರಿಗೆ ಯಾವುದೇ ಹಕ್ಕುಗಳಿದ್ದವೇ? ಮಹಿಳೆ ತನ್ನ ಗಂಡನ ಮರಣದ ನಂತರ ತನ್ನನ್ನು ತಾನು ಚಿತೆಗೆ ಆಹುತಿ ಮಾಡಿಕೊಳ್ಳಬೇಕಿತ್ತು. ಮನುಸ್ಮೃತಿಯಿಂದ ಪ್ರೇರಿತವಾಗಿರುವ ಇಂತಹ ಅಮಾನವೀಯ ಆಚರಣೆಗಳನ್ನು ನಮ್ಮ ಸಂವಿಧಾನ ನಿಷೇಧಿಸಿದೆ ಎಂದು ಸಿಎಂ ಹೇಳಿದರು.

ಬಿಜೆಪಿ ಮತ್ತು ಆರೆಸ್ಸೆಸ್ ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಮನುಸ್ಮೃತಿಯನ್ನು ಮರಳಿ ತರಲು ಬಯಸುತ್ತಿವೆ. ಅವರ ಗರ್ಭಗುಡಿಯೊಳಗೆ ಶೂದ್ರರು, ದಲಿತರು ಮತ್ತು ಮಹಿಳೆಯರಿಗೆ ಪ್ರವೇಶವಿಲ್ಲ ಎಂದು ಅವರು ಹೇಳಿದರು.

ಬಿಜೆಪಿಯ ಹಿರಿಯ ನಾಯಕರಾದ ನಂಜೇಗೌಡ ಮತ್ತು ಗೂಳಿಹಟ್ಟಿ ಶೇಖರ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಸಿದ್ದರಾಮಯ್ಯ, ನಾಗಪುರದ ಆರ್‌ಎಸ್‌ಎಸ್ ಕಚೇರಿಯ ಗರ್ಭಗುಡಿಯೊಳಗೆ ಅವರನ್ನು ಬಿಡಲಿಲ್ಲ. ಇದು ಸತ್ಯ. ಅವರು ಶೂದ್ರರನ್ನು ಕೇವಲ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

Latest Indian news

Popular Stories