ಚುನಾವಣಾ ಬಾಂಡ್‌ಗಳು ‘ಪ್ರಯೋಗ’, ಅದು ಎಷ್ಟು ಪ್ರಯೋಜನಕಾರಿ ಎಂಬುದನ್ನು ಸಮಯ ಹೇಳುತ್ತದೆ: ದತ್ತಾತ್ರೇಯ ಹೊಸಬಾಳೆ

ನಾಗ್ಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್‌ಗಳು ಒಂದು ‘ಪ್ರಯೋಗ’ವಾಗಿದ್ದು, ಅದು ಎಷ್ಟು ಪ್ರಯೋಜನಕಾರಿ ಮತ್ತು ಪರಿಣಾಮಕಾರಿ ಎಂಬುದನ್ನು ಸಮಯ ಹೇಳುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆರ್‌ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಭಾನುವಾರ ಹೇಳಿದ್ದಾರೆ.

ದತ್ತಾತ್ರೆಯ ಹೊಸಬಾಳೆ ಅವರನ್ನು ಆರ್‌ಎಸ್ಎಸ್ ಸರಕಾರ್ಯವಾಹರಾಗಿ (ಪ್ರಧಾನ ಕಾರ್ಯದರ್ಶಿ) ಮರು ಆಯ್ಕೆ ಮಾಡಲಾಗಿದೆ. ನಾಗ್ಪುರದಲ್ಲಿ ನಡೆದ ಆರ್‌ಎಸ್ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭೆ ಅವರನ್ನು ಮರು ಆಯ್ಕೆ ಮಾಡಿದೆ. ಮುಂದಿನ ಮೂರು ವರ್ಷ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. 2021 ರಿಂದ ಅವರು ಈ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಚುನಾವಣಾ ಆಯೋಗವು ಗುರುವಾರ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಸರ್ಕಾರದಿಂದ ಸವಲತ್ತು ಪಡೆಯಲು ವಿವಿಧ ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ ಎನ್ನುವ ಆರೋಪಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಹೊಸಬಾಳೆ ಅವರು, ಚುನಾವಣಾ ಬಾಂಡ್‌ಗಳು ‘ಪ್ರಯೋಗ’ ಆಗಿರುವುದರಿಂದ ಸಂಘವು ಅದರ ಬಗ್ಗೆ ಇನ್ನೂ ಚರ್ಚಿಸಿಲ್ಲ ಎಂದು ಹೇಳಿದರು.

ಚುನಾವಣಾ ಬಾಂಡ್‌ಗಳ ಪರಿಚಯವು ಹಠಾತ್ ಬೆಳವಣಿಗೆಯಲ್ಲ, ಬದಲಿಗೆ ಎಚ್ಚರಿಕೆಯಿಂದ ಪರಿಶೀಲನೆ ಮತ್ತು ಮೇಲ್ವಿಚಾರಣೆಯೊಂದಿಗೆ ಜಾರಿಗೆ ತರಲಾಗಿದೆ. ಈ ಹಿಂದೆಯೂ ಅಂತಹ ಯೋಜನೆಗಳನ್ನು ತರಲಾಗಿದೆ. ಬದಲಾವಣೆಯನ್ನು ಪರಿಚಯಿಸಿದಾಗಲೆಲ್ಲಾ ಪ್ರಶ್ನೆಗಳು ಉದ್ಭವಿಸುತ್ತವೆ. ಇವಿಎಂಗಳನ್ನು ಪರಿಚಯಿಸಿದಾಗಲೂ ಪ್ರಶ್ನೆಗಳನ್ನು ಎತ್ತಲಾಯಿತು ಎಂದು ಅವರು ಹೇಳಿದರು.

‘ಹೊಸ ವಿಷಯಗಳು ಬಂದಾಗ ಜನರಲ್ಲಿ ಪ್ರಶ್ನೆಗಳು ಉದ್ಭವಿಸುವುದು ಸಹಜ. ಆದರೆ, ಹೊಸ ವ್ಯವಸ್ಥೆಯು ಎಷ್ಟು ಪ್ರಯೋಜನಕಾರಿ ಮತ್ತು ಪರಿಣಾಮಕಾರಿಯಾಗಿದೆ ಎಂಬುದನ್ನು ಸಮಯ ಹೇಳುತ್ತದೆ. ಆದ್ದರಿಂದ, ಇದನ್ನು ಪ್ರಯೋಗಕ್ಕೆ ಬಿಡಬೇಕು ಎಂದು ಸಂಘವು ಭಾವಿಸುತ್ತದೆ’ ಎಂದು ಹೊಸಬಾಳೆ ಹೇಳಿದರು.

ನರೇಂದ್ರ ಮೋದಿ ಸರ್ಕಾರದ 10 ವರ್ಷಗಳ ಆಡಳಿತದ ಬಗ್ಗೆ ಕೇಳಲಾದ ಪ್ರಶ್ನೆಗೆ, ಆರ್‌ಎಸ್‌ಎಸ್ ಏಕರೂಪ ನಾಗರಿಕ ಸಂಹಿತೆಯನ್ನು ಸ್ವಾಗತಿಸುತ್ತದೆ. ಅದನ್ನು ಜಾರಿಗೆ ತರಲು ಒತ್ತಾಯಿಸುವ ನಿರ್ಣಯವನ್ನು ಹಲವಾರು ವರ್ಷಗಳ ಹಿಂದೆ ಸಂಘಟನೆಯ ‘ಅಖಿಲ ಭಾರತೀಯ ಪ್ರತಿನಿಧಿ ಸಭೆ’ಯಲ್ಲಿ ಅಂಗೀಕರಿಸಲಾಗಿದೆ ಎಂದು ಹೇಳಿದರು.

ಇದನ್ನು ಬಿಜೆಪಿ ಆಡಳಿತವಿರುವ ಉತ್ತರಾಖಂಡದಲ್ಲಿ ಜಾರಿಗೆ ತರಲಾಗಿದೆ. ಇದು ದೇಶದಾದ್ಯಂತ ಜಾರಿಯಾಗಬೇಕೆಂದು ನಾವು ಬಯಸುತ್ತೇವೆ. ಆದರೆ, ಉತ್ತರಾಧಿಕಾರ, ದತ್ತು ಸ್ವೀಕಾರ, ಮದುವೆ ಮತ್ತು ಇತರ ವಿಷಯಗಳಂತಹ ಕೆಲವು ವಿವರಗಳನ್ನು ಚರ್ಚಿಸಬೇಕಾಗಿದೆ ಮತ್ತು ನಂತರ ಅವರು ಮುಂದುವರಿಯಬಹುದು ಎಂದರು.

ಕಳೆದ 10 ವರ್ಷಗಳಲ್ಲಿ ದೇಶವು ಸಾಧಿಸಿದ ಪ್ರಗತಿಯನ್ನು ಜನರು ನೋಡಿದ್ದಾರೆ ಮತ್ತು ಖ್ಯಾತ ಅಂತರರಾಷ್ಟ್ರೀಯ ತಜ್ಞರು ಮತ್ತು ರಾಜಕೀಯ ಚಿಂತಕರು ಕೂಡ ಸದ್ಯದ ಶತಮಾನವು ಭಾರತದ ಶತಮಾನ ಎಂದು ಪುನರುಚ್ಚರಿಸಿದ್ದಾರೆ. ಅವರು ಈ ರೀತಿ ಹೇಳಲು ಏನಾದರೂ ಒಳ್ಳೆಯದು ಸಂಭವಿಸರಬೇಕು. ಜೂನ್ 4 ರಂದು (ಲೋಕಸಭಾ ಚುನಾವಣಾ ಮತ ಎಣಿಕೆ ದಿನ) ಜನರು ತಮ್ಮ ತೀರ್ಪು ನೀಡುತ್ತಾರೆ ಎಂದು ಅವರು ಹೇಳಿದರು.

Latest Indian news

Popular Stories