ರೈತರ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆ: ಹರಿಯಾಣದ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‌ನೆಟ್ ಸೇವೆ ಸ್ಥಗಿತ

ಚಂಡೀಗಡ: ಫೆಬ್ರವರಿ 13 ರಂದು ರೈತರ ಉದ್ದೇಶಿತ ‘ದೆಹಲಿ ಚಲೋ’ ಮೆರವಣಿಗೆಗೆ ಮುಂಚಿತವಾಗಿ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆಗಳು ಮತ್ತು ಒಮ್ಮೆಲೇ ಹೆಚ್ಚು ಎಸ್ ಎಂಎಸ್ ಕಳುಹಿಸುವ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಹರಿಯಾಣ ಸರ್ಕಾರ ಶನಿವಾರ ಆದೇಶಿಸಿದೆ.

ಅಧಿಕೃತ ಆದೇಶದ ಪ್ರಕಾರ, ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಫೆಬ್ರವರಿ 11 ರಂದು ಬೆಳಿಗ್ಗೆ 6 ರಿಂದ ಫೆಬ್ರವರಿ 13 ರ ಮಧ್ಯಾಹ್ನ 12 ಗಂಟೆಯವರೆಗೂ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ ಸಂಘಟನೆ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸೇರಿದಂತೆ 200 ಕ್ಕೂ ಹೆಚ್ಚು ರೈತ ಸಂಘಗಳು ಫೆಬ್ರವರಿ 13 ರಂದು ‘ದೆಹಲಿ ಚಲೋ’ ಮೆರವಣಿಗೆಯನ್ನು ಆಯೋಜಿಸಿವೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಅಂಗೀಕರಿಸಿ ಕಾನೂನು ಜಾರಿಗೆ ತರುವಂತೆ ಕೇಂದ್ರವನ್ನು ಒತ್ತಾಯಿಸಿ ದಿಲ್ಲಿ ಚಲೋ ನಡೆಯಲಿದೆ ಎನ್ನಲಾಗಿದೆ.

Latest Indian news

Popular Stories