ಕಿಸಾನ್ ಮಹಾಪಂಚಾಯತ್ ನಲ್ಲಿ ಭಾಗಿಯಾಗಲು ದೆಹಲಿಯತ್ತ ರೈತರು: ಪೊಲೀಸರಿಂದ ಬಿಗಿ ಭದ್ರತೆ

ನವದೆಹಲಿ: ಬೆಂಬಲ ಬೆಲೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಪಂಜಾಬ್ ನಿಂದ ಸಾವಿರಾರು ರೈತರು ಕಿಸಾನ್ ಮಹಾಪಂಚಾಯತ್ ನಲ್ಲಿ ಭಾಗಿಯಾಗಲು ದೆಹಲಿಗೆ ಆಗಮಿಸುತ್ತಿದ್ದಾರೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಗೆ ಅನುಮತಿ ನೀಡಲಾಗಿದ್ದು, ಸಂಘಟನೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡುವುದಿಲ್ಲ ಎಂಬ ಭರವಸೆ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಪ್ರವೇಶಿಸುವುದನ್ನು ತಪ್ಪಿಸಿದಲ್ಲಿ ರೈಲು ತಡೆ ಮಾಡುವುದಾಗಿ ಎಸ್ ಕೆಎಂ ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಡಿಸಿಪಿ( ಕೇಂದ್ರ) ಎಂ ಹರ್ಷವರ್ಧನ್, “ರೈತರು ಕಿಸಾನ್ ಮಹಾಪಂಚಾಯತ್ ನಡೆಸುವ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಆದ್ದರಿಂದ ನಾವು ಅವರಿಗೆ ಪ್ರತಿಭಟನೆ ನಡೆಸುವುದಕ್ಕೆ ಅನುಮತಿ ನೀಡಿದ್ದೇವೆ, ಈ ಬಗ್ಗೆ ರೈತರು ನಮಗೆ ಲಿಖಿತ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ರಾಮಲೀಲಾ ಮೈದಾನದಲ್ಲಿ 5,000 ಮಂದಿಗೆ ಪ್ರವೇಶಿಸುವುದಕ್ಕೆ ಅನುಮತಿ ನೀಡಲಾಗಿದೆ. ಟ್ರ್ಯಾಕ್ಟರ್-ಟ್ರಾಲಿಗಳಿಗೆ ಅಥವಾ ಮೆರವಣಿಗೆಗೆ ಅನುಮತಿ ನೀಡಲಾಗಿಲ್ಲ, ಪೊಲೀಸ್ ಅಧಿಕಾರಿಗಳು ಅರೆಸೇನಾಪಡೆಗಳ ನಿಯೋಜನೆಗೆ ಮನವಿ ಮಾಡಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಪ್ರಚೋದನಕಾರಿ ಭಾಷಣ ಮಾಡಿದರೆ ಸ್ಪೀಕರ್ ಗಳನ್ನು ಬಂದ್ ಮಾಡಲಾಗುತ್ತದೆ ಹಾಗೂ ವೇದಿಕೆಯಿಂದ ತೆರವುಗೊಳಿಸಲಾಗುತ್ತದೆ ಎಂದು ಡಿಸಿಪಿ ಎಚ್ಚರಿಕೆ ನೀಡಿದ್ದಾರೆ. ಮಧ್ಯಾಹ್ನ 3 ಗಂಟೆ ವೇಳೆಗೆ ಕಾರ್ಯಕ್ರಮ ಮುಗಿಯುವ ಸಾಧ್ಯತೆ ಇದೆ.

Latest Indian news

Popular Stories