ಶಿವರಾತ್ರಿಯಂದು ಭೀಕರ ಅಪಘಾತ: ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಐವರು ಮೃತ್ಯು

ತಿರುಚ್ಚಿ: ಮಹಾಶಿವರಾತ್ರಿ ದಿನವಾದ ಇಂದು ಮುಂಜಾನೆ ತಮಿಳುನಾಡಿನ ಕರೂರ್ ಜಿಲ್ಲೆಯ ಕುಳಿತ್ತಲೈ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ತಂಜಾವೂರು ಜಿಲ್ಲೆಯ ಒರತನಾಡು ಸಮೀಪದ ಒಕ್ಕನಾಡು ಕೀಲಯೂರಿನ ದೇವಸ್ಥಾನವೊಂದಕ್ಕೆ ಚಾಲಕನೊಂದಿಗೆ ಒಂದೇ ಕುಟುಂಬದ ನಾಲ್ವರು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ತಿರುಚ್ಚಿ-ಕರೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತಲೈ ಬಳಿ ಮುಂಜಾನೆ 2:15 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟು ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎಂ.ತಂಗವೇಲ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕೆ.ಫಿರೋಜ್ ಖಾನ್ ಅಬ್ದುಲ್ಲಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಮೃತರು ಪ್ರಯಾಣಿಸುತ್ತಿದ್ದ ಕಾರು ಕರೂರ್-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತ್ತಲೈ ಬಳಿ ತಿರುಪುರ ಕಡೆಗೆ ಬರುತ್ತಿದ್ದ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆ ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಬಸ್‌ನ ಕೆಳಭಾಗಕ್ಕೆ ನುಗ್ಗಿದ್ದು, ಸಂಪೂರ್ಣ ನಜ್ಜುಗುಜ್ಜಾಗಿದೆ. ಅವಶೇಷಗಳಡಿ ಸಿಲುಕಿ ಚಾಲಕ ಸೇರಿದಂತೆ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಕುಳಿತಲೈ ಪೊಲೀಸರು ಅಗ್ನಿಶಾಮಕ ಮತ್ತು ರಕ್ಷಣಾ ಪಡೆ ಸಿಬ್ಬಂದಿಯ ನೆರವಿನಿಂದ ಸುಮಾರು 1.5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಜ್ಜುಗುಜ್ಜಾಗಿದ್ದ ಕಾರಿನಿಂದ ಮೃತದೇಹಗಳನ್ನು ಹೊರತೆಗೆದರು. ನಂತರ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕುಳಿತ್ತಲೈ ಸರ್ಕಾರಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

 

Latest Indian news

Popular Stories