ಎಸ್ ಬಿಐ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ದಾವೆ ದಾಖಲು

ನವದೆಹಲಿ: ಎಸ್ ಬಿಐ (SBI) ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ದಾವೆ ದಾಖಲಾಗಿದೆ. ಯಾವ ಯಾವ ರಾಜಕೀಯ ಪಕ್ಷಗಳು ಎಷ್ಟು ಚುನಾವಣಾ ಬಾಂಡ್ (electoral bonds) ಗಳನ್ನು ನಗದು ರೂಪಕ್ಕೆ ಪರಿವರ್ತನೆ ಮಾಡಿಕೊಂಡಿವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಜೂ.30 ವರೆಗೆ ಗಡುವನ್ನು ವಿಸ್ತರಿಸಬೇಕೆಂದು ಎಸ್ ಬಿಐ ಅರ್ಜಿ ಸಲ್ಲಿಸಿತ್ತು. ಎಸ್ ಬಿಐ ಸಲ್ಲಿಸಿದ್ದ ಈ ಅರ್ಜಿಯನ್ನು ಪ್ರಶ್ನಿಸಿರುವ ಎನ್ ಜಿಒ ಸುಪ್ರೀಂ ಕೋರ್ಟ್ ನಲ್ಲಿ ಎಸ್ ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿವೆ.

ಎನ್ ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪರ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್ ಅವರ ಅರ್ಜಿಯನ್ನು ಸಿಜೆಐ ಡಿವೈ ಚಂದ್ರಚೂಡ್ ಅವರಿದ್ದ ಪೀಠ ಪರಿಗಣಿಸಿದೆ.

ಮಾರ್ಚ್ 11 ರಂದು ಎಸ್‌ಬಿಐ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದ್ದು ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಹ ಒಟ್ಟಿಗೆ ಆಲಿಸಬೇಕು ಎಂದು ಭೂಷಣ್ ಮನವಿ ಮಾಡಿದ್ದಾರೆ.

ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯವನ್ನು ವಿಸ್ತರಿಸುವಂತೆ ಕೋರಿ ಎಸ್‌ಬಿಐ ಮಾರ್ಚ್ 4 ರಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಫೆಬ್ರವರಿಯಲ್ಲಿ ನೀಡಿದ ತನ್ನ ತೀರ್ಪಿನಲ್ಲಿ ಚುನಾವಣಾ ಬಾಂಡ್ ಗಳನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಮಾರ್ಚ್ 6 ರೊಳಗೆ ಚುನಾವಣಾ ಆಯೋಗಕ್ಕೆ (ಇಸಿ) ಬಾಂಡ್ ಗಳ ಕುರಿತು ವಿವರಗಳನ್ನು ನೀಡುವಂತೆ ಎಸ್‌ಬಿಐಗೆ ಸೂಚಿಸಿತ್ತು.

Latest Indian news

Popular Stories