ವಿಜಯಪುರ: ಮಳೆಯ ಅಭಾವದಿಂದ ಭೂತನಾಳ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪರ್ಯಾಯ ಮಾರ್ಗದಿಂದ ತಿಡಗುಂದಿ ಅಕ್ವಾಡೆಕ್ಟ್ ಮೂಲಕ ಭೂತನಾಳ ಕೆರೆಗೆ ನೀರು ತುಂಬಿಸಿ ನೀರು ಪೂರೈಸುವ ಕಾಮಗಾರಿಯನ್ನು ತೀವ್ರಗತಿಯಲ್ಲಿ ಕೈಗೊಂಡು ಮೂರು ದಿನಗಳಲ್ಲಿ ಪೂರ್ಣಗೊಳಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ ನಗರಕ್ಕೆ ನೀರು ಸರಬರಾಜು ಮಾಡುವ ಭೂತನಾಳ ಕೆರೆಯನ್ನು ತಿಡಗುಂದಿ ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸುವ ಪರ್ಯಾಯ ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಕಾಮಗಾರಿಯನ್ನು ತೀವ್ರಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸಿ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಥಮಾದ್ಯಮತೆಯ ಮೇಲೆ ನೀಗಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಸಧ್ಯದಲ್ಲೇ ಕೆರೆತುಂಬುವ ಯೋಜನೆಯಡಿ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರಥಮಾದ್ಯತೆಯಾಗಿ ಪರ್ಯಾಯ ವ್ಯವಸ್ಥೆಯಲ್ಲಿ ಭೂತನಾಳ ಕೆರೆಗೆ ನೀರು ತುಂಬಿಸಲು ತಿಡಗುಂದಿ ಕಾಲುವೆ ಮೂಲಕ ಕೆರೆಗೆ ನೀರು ಹರಿಸಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುಂತೆ ಸೂಚನೆ ನೀಡಿದ ಅವರು, ಪರ್ಯಾಯವಾಗಿ ಕೆರೆಗೆ ನೀರು ತುಂಬಿಸುವ ಕಾಮಗಾರಿಯನ್ನು ಯುದ್ದೋಪಾದಿಯಲ್ಲಿ ಕೈಗೊಂಡು ಪೂರ್ಣಗೊಳಿಸಿ, ಬೇಸಿಗೆಯಲ್ಲಿ ನಗರದಾದ್ಯಂತ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ತೀವ್ರವಾದ ಬರಗಾಲವಿದೆ. ಬರಗಾಲವಿರುವುದರಿಂದ ಸರ್ಕಾರ ಕುಡಿಯುವ ನೀರಿಗೆ ಅದ್ಯತೆ ನೀಡುತ್ತಿದೆ. ವಿಜಯಪುರ ನಗರಕ್ಕೆ ಭೂತನಾಳ ಕೆರೆಯ ನೀರು ಕುಡಿಯಲು ಬಳಸಲಾಗುತ್ತಿದೆ.ಮಳೆ ಕೊರತೆಯಿಂದ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ತಾತ್ಕಾಲಿಕವಾಗಿ ಕುಡಿಯುವ ನೀರಿನ ಸಮಸ್ಯೆಬಾರದಂತೆ ನೋಡಿಕೊಳ್ಳಲು ಅಕ್ವಾಡೆಕ್ಟ್ ಮೂಲಕ ನೀರು ತುಂಬಿಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಹಾಗೂ 1200ಎಂಎಂ ಪೈಪ್ ಅಳವಡಿಸಿ ಅಕ್ವಾಡೆಕ್ಟ್ ಮೂಲಕ ಶಾಶ್ವತವಾಗಿ ಭೂತನಾಳ ಕೆರೆ ತುಂಬಿಸಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಮಹಾನಗರ ಪಾಲಿಕೆ ಆಯುಕ್ತ ಬದ್ರೂದ್ದಿನ ಸೌದಾಗರ, ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಗುರುರಾಜ ಭಂಗಿನವರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ತುರ್ತಾಗಿ ನೀರು ಒದಗಿಸಲು ಕ್ರಮ ವಹಿಸಿ: ಸಚಿವ ಎಂ.ಬಿ.ಪಾಟೀಲ ಸೂಚನೆ
ವಿಜಯಪುರ: ಜಿಲ್ಲೆ ಸೇರಿದಂತೆ ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ತುರ್ತಾಗಿ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ದಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಸೂಚನೆ ನೀಡಿದರು.
ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ನಿರ್ವಹಣೆ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರಾಜ್ಯದಾದ್ಯಂತ ಬರಗಾಲವಿರುವುದರಿಂದ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ಬಂದ ಕಡೆಗಳಲ್ಲಿ ತುರ್ತಾಗಿ ಟ್ಯಾಂಕರ್ ಮೂಲಕ ನೀರು ಒದಗಿಸಲು ಕ್ರಮ ವಹಿಸಬೇಕು. ಬೊರವೆಲ್ ಕೊರೆಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುವುದರಿಂದ ಪರ್ಯಾಯವಾಗಿ ಇದ್ದ ಮೂಲಗಳಿಂದಲೇ ಟ್ಯಾಂಕರ್ ಮೂಲಕ ತುರ್ತಾಗಿ ನೀರು ಒದಗಿಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಜಯಪುರ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಿಡಗುಂದಿ ಅಕ್ವಾಡೆಕ್ಟ್ ಮೂಲಕ ಭೂತನಾಳ ಕೆರೆಯನ್ನು ತುಂಬಿಸಲು ತಾತ್ಕಾಲಿಕವಾಗಿ ಸ್ಟೋರೇಜ್ ನಿರ್ಮಿಸಿಕೊಂಡು ಕೆರೆ ತುಂಬಿಸಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ವಹಿಸಬೇಕು. ವಿಜಯಪುರ ನಗರದಲ್ಲಿ ಜಲಮಂಡಳಿಯಿಂದ ಕೊರೆಯಿಸಲಾದ 20 ಬೊರವೆಲ್ಗಳಿಗೆ ಮಾಸಾಂತ್ಯದೊಳಗೆ ತುರ್ತಾಗಿ ಮೋಟರ್ ಅಳವಡಿಸಿ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಸಣ್ಣ ಪುಟ್ಟ ದುರಸ್ತಿಗಳಿರುವ ಬೊರವೆಲ್ಗಳ ದುರಸ್ತಿಗೆ ಕ್ರಮ ವಹಿಸಿ ನೀರು ಒದಗಿಸಲು ಮುಂದಾಗಬೇಕು. ಈಗಾಗಲೇ 8 ಖಾಸಗಿ ಬೊರವೆಲ್ಗಳು ನೀಡಲು ಮುಂದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ನಗರದ ಆಯಾ ವಾರ್ಡಗಳಲ್ಲಿ ಖಾಸಗಿ ಬೊರವೆಲ್ಗಳನ್ನು ಬಾಡಿಗೆ ಮೇಲೆ ಪಡೆದು ನೀರು ಒದಗಿಸಲು ಕ್ರಮ ವಹಿಸಬೇಕು. ಈಗಾಗಲೇ ಗುರುತಿಸಲಾದ 28 ಸರ್ಕಾರಿ ಹಾಗೂ ಖಾಸಗಿ ಭಾವಿಗಳ ನೀರಿನ ಬಳಕೆ ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಮೋಟರ್-ಪಂಪ್ ಅಳವಡಿಸಿ ಕುಡಿಯಲು ನೀರು ಯೋಗ್ಯವಿಲ್ಲದಿದ್ದಲ್ಲಿ ಭಾವಿಯ ನೀರು ಗೃಹಬಳಕೆ ಉಪಯೋಗ ಮಾಡಲು ಕ್ರಮ ವಹಿಸಬೇಕು. ಇದರಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ನಗರದಲ್ಲಿರುವ ಸರ್ಕಾರಿ ಭಾವಿ ಹಾಗೂ ಬೊರವೆಲ್ಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ದುರಸ್ತಿ ಇರುವ ಬೊರವೆಲ್ಗಳನ್ನು ದುರಸ್ತಿಗೊಳಿಸಬೇಕು. ಭಾವಿಗಳನ್ನು ಸ್ವಚ್ಛಗೊಳಿಸಿ ನೀರಿನ ಸದ್ಭಳಕೆಗೆ ಮುಂದಾಗಬೇಕು. ಆಯಾ ವಾರ್ಡಗಳಲ್ಲಿರುವ ಬೊರವೆಲ್, ಭಾವಿಗಳನ್ನು ಸ್ವಚ್ಛಗೊಳಿಸಿದ್ದಲ್ಲಿ ವಾರ್ಡಿನ ನೀರಿನ ಸಮಸ್ಯೆಗೆ ಪರಿಹಾರ ಸಿಗುವುದರಿಂದ ಈ ತಿಂಗಳ 28ರೊಳಗೆ ಲಭ್ಯವಿರುವ ಎಲ್ಲ ಕೊಳವೆಭಾವಿ- ಭಾವಿಗಳ ನೀರಿನ ಬಳಕೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯ 15 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರಸ್ತುತ ಯಾವುದೇ ನೀರಿನ ತೀವ್ರತರವಾಗಿ ಸಮಸ್ಯೆ ಎದುರಾಗಿಲ್ಲ. ಆಲಮೇಲ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಮಾರ್ಚವರೆಗೆ ಯಾವುದೇ ನೀರಿನ ಸಮಸ್ಯೆ ಎದುರಾಗುವುದಿಲ್ಲ. ಮಾರ್ಚ್ ನಂತರ ಬರಬಹುದಾದ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಈಗಿನಿಂದಲೇ ಟ್ಯಾಂಕರ್ ವ್ಯವಸ್ಥೆ ಸೇರಿದಂತೆ ಬೊರವೆಲ್ಗಳಗಳನ್ನು ಗುರುತಿಸಿಕೊಂಡು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ತಾಲೂಕಾ, ಗ್ರಾಮ ಮಟ್ಟದ ಟಾಸ್ಕಪೋರ್ಸ್ ಸಮಿತಿಗಳು ಕಾಲಕಾಲಕ್ಕೆ ನಿರಂತರವಾಗಿ ಸಭೆಗಳನ್ನು ನಡೆಸಿ ಇದ್ದ ಸಣ್ಣಪುಟ್ಟ ಸಮಸ್ಯೆಗಳನ್ನು ನಿವಾರಿಸಿಕೊಂಡು ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪಾಲಿಕೆ ಅಧಿಕಾರಿಗಳು ಜಲಮಂಡಳಿ ಅಧಿಕಾರಿಗಳ ಮೇಲೆ ಜಲಮಂಡಳಿ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳ ಮೇಲೆ ಬೊಟ್ಟು ತೋರಿಸಿದೇ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕುಡಿಯುವ ನೀರಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಯಾರೂ ಸಹ ನಿರ್ಲಕ್ಷ್ಯ ವಹಿಸದೇ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಜನರಿಗೆ ಕುಡಿಯುವ ನೀರು ಒದಗಿಸಲು ಮುಂದಾಗುವಂತೆ ಅವರು ಸೂಚನೆ ನೀಡಿದರು.
ಕುಡಿಯುವ ನೀರು ಒದಗಿಸಲು ಯಾವುದೇ ಅನುದಾನದ ಕೊರತೆಯಿಲ್ಲ. ವಿಪತ್ತು ಪರಿಹಾರ ನಿಧಿಯಲ್ಲಿ 18 ಕೋಟಿ ರೂ. ಇದೆ. ಟ್ಯಾಂಕರ್ ಮೂಲಕ ನೀರು ಪೂರೈಕೆ, ಪೈಪಲೈನ್, ಬಾಡಿಗೆ ಪಾವತಿ ಸೇರಿದಂತೆ ಈ ಹಣವನ್ನು ಬಳಕೆ ಮಾಡಿಕೊಂಡು ತುರ್ತಾಗಿ ನೀರು ಒದಗಿಸಲು ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ನಾಗಠಾಣ ಶಾಸಕರಾದ ವಿಠ್ಠಲ ಕಟಕದೊಂಡ, ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ಮಾಹೆಜಬಿನ್ ಹೊರ್ತಿ, ಉಪಮಹಾಪೌರ ದಿನೇಶ್ ಹಳ್ಳಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.