ಹೈದರಾಬಾದ್: ತೆಲಂಗಾಣ ರಾಜದಾನಿ ಹೈದರಾಬಾದ್ ನಲ್ಲಿ ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಡೀ ಅಂಗಡಿ ಬೆಂಕಿಗಾಹುತಿಯಾದ ಭೀಕರ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ದೀಪಾವಳಿಗೆ ಮುನ್ನ ಮಾರಾಟಕ್ಕಾಗಿ ಅಂಗಡಿಯಲ್ಲಿ ಶೇಖರಿಸಿಡಲಾಗಿದ್ದ ಪಟಾಕಿಗಳಿಗೆ ಬೆಂಕಿ ತಗುಲಿ ಇಡೀ ಅಂಗಡಿ ಭಸ್ಮವಾಗಿದೆ.
ಭಾನುವಾರ ರಾತ್ರಿ ಹೈದರಾಬಾದ್‌ನ ರಾಮ್‌ಕೋಟೆಯಲ್ಲಿರುವ ಪಟಾಕಿ ಅಂಗಡಿಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಈ ಪ್ರದೇಶದ ಹಲವಾರು ವ್ಯಾಪಾರಿಗಳಲ್ಲಿ ಭೀತಿಯನ್ನು ಉಂಟುಮಾಡಿತ್ತು. ಪರಾಸ್ ಪಟಾಕಿಯ ಸಗಟು ಪಟಾಕಿ ಅಂಗಡಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಅಂಗಡಿಯೊಳಗೆ ಪಟಾಕಿಗಳು ಬೆಂಕಿ ತಗುಲಿ ಸಿಡಿದಿದ್ದು, ಭಯಭೀತರಾದ ಗ್ರಾಹಕರು ಗಾಬರಿಯಿಂದ ಹೊರಗೆ ಓಡಿಹೋಗಿದ್ದಾರೆ. ಸ್ಫೋಟ ಪ್ರಾರಂಭವಾಗುತ್ತಿದ್ದಂತೆ, ಅನೇಕರು ಅಂಗಡಿಯಿಂದ ಹೊರಗೆ ಓಡಿಬಂದಿದ್ದು, ಆದರೆ ಕೆಲವರು ಬೆಂಕಿ ಜ್ವಾಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ವೀಡಿಯೊದ ಕೊನೆಯಲ್ಲಿ, ಅಂಗಡಿಯಿಂದ ದಟ್ಟವಾದ ಹೊಗೆ ಬರುತ್ತಿರುವ ಆತಂಕಕಾರಿ ದೃಶ್ಯ ಕಾಣುತ್ತದೆ.
ಇನ್ನು ವಿಚಾರ ತಿಳಿದ ಕೂಡಲೇ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿವೆ. ಪಟಾಕಿಗಳು ಸಿಡಿಯುತ್ತಲೇ ಇದ್ದುದರಿಂದ ಪರಿಸ್ಥಿತಿ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿಗೂ ಸವಾಲಾಗಿತ್ತು. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂತೆಯೇ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೆಲವರಿಗೆ ಸುಟ್ಟಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.