ಊಟದ ಬಳಿಕ ಮೌತ್‌ ಫ್ರೆಶ್ನರ್‌ ತಿಂದ ಐವರಿಗೆ ರಕ್ತವಾಂತಿ:ಇಬ್ಬರ ಸ್ಥಿತಿ ಚಿಂತಾಜನಕ!

ನವದೆಹಲಿ: ಹೋಟೆಲ್‌ ವೊಂದರಲ್ಲಿ ಊಟ ಮುಗಿಸಿದ ನಂತರ ಮೌತ್‌ ಫ್ರೆಶ್ನರ್‌ ತಿಂದ ಐವರು ರಕ್ತವಾಂತಿ ಮಾಡಿಕೊಂಡಿರುವ ಆಘಾತಕಾರಿ ಘಟನೆ ಗುರುಗ್ರಾಮ್‌ ಕೆಫೆಯಲ್ಲಿ ನಡೆದಿದೆ.

ಅಂಕಿತ್‌ ಕುಮಾರ್‌ ಪತ್ನಿ ಹಾಗೂ ಸ್ನೇಹಿತರು ಗುರುಗ್ರಾಮ್‌ ಸೆಕ್ಟರ್‌ 90ರಲ್ಲಿರುವ ಲಾಫೋರೆಸ್ಟಾ ಕೆಫೆಗೆ ಹೋಗಿದ್ದರು. ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ, ಕುಮಾರ್‌, ಪತ್ನಿ ಹಾಗೂ ಆತನ ಗೆಳೆಯರು ಅಳುತ್ತಾ, ಕೂಗಾಡುತ್ತಿದ್ದು, ಎಲ್ಲರ ಬಾಯಿಂದ ರಕ್ತ ಸುರಿಯುತ್ತಿರುವುದು ದಾಖಲಾಗಿದೆ.
ನಮಗೆ ಏನೂ ಅಂತ ಅರ್ಥವಾಗ್ತಿಲ್ಲ ಅವರು ಅದರಲ್ಲಿ (ಮೌತ್‌ ಫ್ರೆಶ್ನರ್)‌ ಏನು ಮಿಶ್ರಣ ಮಾಡಿದ್ದಾರೋ. ನಾವೆಲ್ಲರೂ ರಕ್ತವಾಂತಿ ಮಾಡಿಕೊಂಡಿದ್ದೇವೆ. ನಮ್ಮ ಬಾಯಿಯೊಳಗೆ ಬೆಂಕಿ ಬಿದ್ದ ಹಾಗಿತ್ತು. ಅವರು ಯಾವ ವಿಧದ ಆಸಿಡ್‌ ಕೊಟ್ಟಿದ್ದಾರೋ ಎಂದು ಕುಮಾರ್‌ ತಿಳಿಸಿರುವುದಾಗಿ ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ನಾವು ರೆಸ್ಟೋರೆಂಟ್‌ ನವರು ಕೊಟ್ಟ ಮೌತ್‌ ಫ್ರೆಶ್ನರ್‌ ಪ್ಯಾಕೇಟ್‌ ಅನ್ನು ವೈದ್ಯರಿಗೆ ತೋರಿಸಿದ್ದು, ಅದು ಡ್ರೈ ಐಸ್‌ (ಒಣ ಐಸ್)‌ ಎಂದು ತಿಳಿಸಿದ್ದರು. ವೈದ್ಯರ ಹೇಳಿಕೆಯ ಪ್ರಕಾರ, ಇದೊಂದು Acid ಆಗಿದ್ದು, ಇದು ಮಾರಣಾಂತಿಕವಾದದ್ದು ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.

ಮೊದಲು ಐವರಿಗೆ ನಾಲಗೆಯಲ್ಲಿ ಉರಿ ಕಾಣಿಸಿಕೊಂಡಿದ್ದು, ಬಳಿಕ ರಕ್ತವಾಂತಿ ಶುರುವಾಗಿತ್ತು. ಬಾಯಿ ಉರಿ ಶಮನಕ್ಕೆ ನೀರು ಕುಡಿದಿದ್ದರು ಕೂಡಾ ಅದು ಪ್ರಯೋಜನವಾಗಿಲ್ಲವಾಗಿತ್ತು. ಐವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ.

Latest Indian news

Popular Stories