ಮಡಿಕೇರಿ | ಮೇಲುಸೇತುವೆ ಕಾಮಗಾರಿ ಪೂರ್ಣ; ಇನ್ನು ಪ್ರವಾಹದ ಭೀತಿ ಇಲ್ಲ

ಮಡಿಕೇರಿ: ಪ್ರತಿ ಮಳೆಗಾಲದಲ್ಲಿ ಪ್ರವಾಹದಿಂದ ದ್ವೀಪದಂತಾಗುತ್ತಿದ್ದ ಭಾಗಮಂಡಲದಲ್ಲಿ ಮೇಲುಸೇತುವೆ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ. ಇದೀಗ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ಸೇತುವೆಯನ್ನು ಮುಕ್ತಗೊಳಿಸಲಾಗಿದೆ.

ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿ ಅನುಷ್ಠಾನಗೊಂಡಿದ್ದು, ಒಟ್ಟು 28 ಕೋಟಿ ರೂ.ಗಳಲ್ಲಿ ಸೇತುವೆ ನಿರ್ಮಾಣಗೊಂಡಿದೆೆ. ಈ ಮೇಲ್ಸೇತುವೆ ಭಾಗಮಂಡಲ ಪ್ರವೇಶ ದ್ವಾರದ ಮುಂದಿನಿಂದ ಪ್ರಾರಂಭವಾಗಿ ತಲಕಾವೇರಿ ರಸ್ತೆಯನ್ನು ಸಂಪರ್ಕಿಸುತ್ತದೆ. ಮಾತ್ರವಲ್ಲದೇ ನಾಪೋಕ್ಲು ಕಡೆಗೆ ತೆರಳುವ ಸೇತುವೆ ಬಳಿ ಕೊನೆಗೊಳ್ಳುತ್ತದೆ. ಒಟ್ಟು 880 ಮೀಟರ್‌ ಉದ್ದವಿದ್ದು, ಮಡಿಕೇರಿ-ಭಾಗಮಂಡಲ, ಭಾಗಮಂಡಲ-ತಲಕಾವೇರಿ, ಭಾಗಮಂಡಲ-ಅಯ್ಯಂಗೇರಿ ಎಂಬಂತೆ ಒಟ್ಟು 3 ಭಾಗಗಳಾಗಿ ವಿಂಗಡಿಸಲಾಗಿದೆ.

ಸೇತುವೆಯಲ್ಲಿ 60 ಟನ್‌ ಗೂ ಮೇಲ್ಪಟ್ಟ ಭಾರದ ವಾಹನಗಳು ಸಂಚರಿಸಬಹುದಾಗಿದ್ದು, 40 ಕಿ.ಮೀ ವೇಗದ ಮಿತಿ ನಿಗಧಿ ಮಾಡಲಾಗಿದೆ. ವಿದ್ಯುತ್‌ ದೀಪಗಳು, ಕೇಬಲ್‌, ಮಳೆ ನೀರು ಹರಿಯಲು ಪೈಪ್‌ ಗಳನ್ನು ಅಳವಡಿಸಲಾಗಿದ್ದು, ಸುಣ್ಣಬಣ್ಣ ಬಳಿಯುವ ಕಾರ್ಯ ಪೂರ್ಣಗೊಂಡಿದೆ.
ಭಾಗಮಂಡಲ ಹಾಗೂ ತಲಕಾವೇರಿ ವ್ಯಾಪ್ತಿಯ ಗ್ರಾಮಸ್ಥರಿಗೆ ಈ ಸೇತುವೆ ಹೆಚ್ಚು ಸಹಕಾರಿಯಾಗಿದೆ. ಅಲ್ಲದೆ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಗೆ ಆಗಮಿಸುವ ಭಕ್ತರಿಗೂ ಅನುಕೂಲವಾಗಿದೆ. ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಬಾರಿ ಇಲ್ಲಿನ ಜನ ಹಾಗೂ ಭಕ್ತರು ಪ್ರವಾಹದ ಆತಂಕದಿಂದ ಮುಕ್ತರಾಗಿ ಸಂಚರಿಸಬಹುದಾಗಿದೆ. ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಅನಂತರ ಮೇಲುಸೇತುವೆಯನ್ನು ಉದ್ಘಾಟಿಸಲು ಸರಕಾರ ಚಿಂತನೆ ನಡೆಸಿದೆ.

ಭಾಗಮಂಡಲ ಮೇಲ್ಸೇತುವೆ ಕಾಮಗಾರಿಯನ್ನು ಅತ್ಯಂತ ಶ್ರಮವಹಿಸಿ ಪೂರ್ಣಗೊಳಿಸಲಾಗಿದೆ. ಮಳೆಗಾಲ ಆರಂಭವಾಗುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರಕ್ಕೆ ಈಗಾಗಲೇ ಅನುವು ಮಾಡಿಕೊಡಲಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಈ ಮಳೆಗಾಲ ಪ್ರವಾಹ ಬಂದರೂ ಮಡಿಕೇರಿಯಿಂದ ಭಾಗಮಂಡಲ-ತಲಕಾವೇರಿ, ಭಾಗಮಂಡಲ-ನಾಪೋಕ್ಲು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ

Latest Indian news

Popular Stories