ಬಂಧನದಲ್ಲಿದ್ದ ಗ್ಯಾಂಗ್‌ಸ್ಟರ್-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನ: 144 ಸೆಕ್ಷನ್ ಜಾರಿ, ಬಿಗಿ ಭದ್ರತೆ

ಉತ್ತರಪ್ರದೇಶದ ಬಾಂದಾ ಜೈಲಿನಲ್ಲಿದ್ದ ಬಂಧಿತ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿರುವುದಾಗಿ ವರದಿಯಾಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನ ವೈದ್ಯರು, “ಇಂದು ರಾತ್ರಿ 8:25 ರ ಸುಮಾರಿಗೆ ಅಪರಾಧಿ ಹಾಗೂ ವಿಚಾರಣಾಧೀನ ಕೈದಿಯಾಗಿದ್ದ ಸುಮಾರು 63 ವರ್ಷ ವಯಸ್ಸಿನ ಮುಖ್ತಾರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನ್ಸಾರಿ ವಾಂತಿ ಮತ್ತು ಪ್ರಜ್ಞಾಹೀನ ಸ್ಥಿತಿಯಲ್ಲಿ ಜೈಲಲ್ಲಿ ಬಿದ್ದಿದ್ದರು. ಕೂಡಲೇ ಬಾಂದಾ ಜೈಲಿನ ಸಿಬ್ಬಂದಿ ರಾಣಿ ದುರ್ಗಾವತಿ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗಕ್ಕೆ ಕರೆತರಲಾಗಿತ್ತು. ಸುಮಾರು 9 ವೈದ್ಯರ ತಂಡ ರೋಗಿಗೆ ತಕ್ಷಣದ ವೈದ್ಯಕೀಯ ಸೇವೆಯನ್ನು ಒದಗಿಸಿದರೂ ಕೂಡ, ಚಿಕಿತ್ಸೆಗೆ ಸ್ಪಂದಿಸದೆ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ತಾರ್ ಅನ್ಸಾರಿ ನಿಧನರಾದ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಮೌ, ಬಾಂದಾ ಮತ್ತು ಗಾಝೀಪುರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎಎನ್ಎಸ್ ಮಾಹಿತಿ ನೀಡಿದೆ.

Latest Indian news

Popular Stories