ಮುಂಬೈ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಉಂಟಾದ ಅನಿಲ ಸೋರಿಕೆ ಬಳಿಕ ಇಡೀ ನಗರಕ್ಕೆ ವ್ಯಾಪಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಅಂಬರನಾಥದಲ್ಲಿ ಕೆಮಿಕಲ್ ಕಾರ್ಖಾನೆಯಿಂದ ಅನಿಲ ಸೋರಿಕೆ ಸಂಭವಿಸಿ ಆತಂಕ ಸೃಷ್ಟಿಸಿದೆ. ಕೆಲವೇ ಗಂಟೆಗಳಲ್ಲಿ ವಿಷಕಾರಿ ಅನಿಲ ಇಡೀ ನಗರವನ್ನು ವ್ಯಾಪಿಸಿದ್ದು, ಹಲವು ನಿವಾಸಿಗಳಲ್ಲಿ ಆರೋಗ್ಯ ಏರುಪೇರಾಗಿದೆ ಎಂದು ಹೇಳಲಾಗಿದೆ.
ಅಂಬರನಾಥ್ ನಗರದಲ್ಲಿ ಗ್ಯಾಸ್ ಲೀಕ್ ನಿಂದಾಗಿ ಗೋಚರತೆ ಕಡಿಮೆಯಾಗಿದ್ದು, ನಿವಾಸಿಗಳಲ್ಲಿ ಕಣ್ಣುಗಳು ಮತ್ತು ಗಂಟಲಿಗೆ ಕಿರಿಕಿರಿಯನ್ನು ಉಂಟುಮಾಡುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಅಲ್ಲದೆ ಇದು 1984 ರ ಭೋಪಾಲ್ ಅನಿಲ ದುರಂತದ ನೆನಪುಗಳನ್ನು ಮರಳಿ ತರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಗರಾದ್ಯಂತ ವಿಷಕಾರಿ ಅನಿಲ ಹಬ್ಬಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಓಡಾಡುತ್ತಿರುವ ಸಾರ್ವಜನಿಕರು ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇ ಬಗ್ಗೆ ಮಾಹಿತಿ ನೀಡಿರುವ ಪಾಲಿಕೆ ಅಧಿಕಾರಿಗಳು ಈ ವರೆಗೂ ಯಾವುದೇ ತೀವ್ರ ಪರಿಣಾಮ ಅಥವಾ ಪ್ರಾಣಾಪಾಯ ವರದಿಯಾಗಿಲ್ಲ ಎಂದು ಹೇಳಿದ್ದಾರೆ.
ಅಂತೆಯೇ ಸೋರಿಕೆಯಾಗಿರುವ ವಿಷಾನಿಲ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ತಂಡಗಳನ್ನು ಸಹ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜನರು ಮನೆಯೊಳಗೆ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.