ಸಿಜೆಐ ಮೂಲಕ ದೇವರು ಮಾತನಾಡಿದ್ದಾರೆ, ಬಿಜೆಪಿಯ ಅಧರ್ಮ ಅಂತ್ಯಗೊಳಿಸಲು ನಿರ್ಧಾರ: ದೆಹಲಿ ಸಿಎಂ ಕೇಜ್ರಿವಾಲ್

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಮೂಲಕ ದೇವರು ಮಾತನಾಡಿದ್ದಾರೆ. ಬಿಜೆಪಿಯ ಅಧರ್ಮ ಅಂತ್ಯಗೊಳಿಸಲು ದೇವರು ನಿರ್ಧರಿಸಿದ್ದಾನೆ ಎಂದು ದೆಹಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಹೇಳಿದ್ದಾರೆ.

ಇಂದು ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಚಂಡೀಗಢ ಮೇಯರ್ ಚುನಾವಣೆಯ ಫಲಿತಾಂಶ ತಿರುಚಿದ ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಭಗವದ್ಗೀತೆಯನ್ನು ಉಲ್ಲೇಖಿಸಿದ ಕೇಜ್ರಿವಾಲ್, ಭಾರತೀಯ ಜನತಾ ಪಕ್ಷದ(ಬಿಜೆಪಿ) ಚಾಲ್ತಿಯಲ್ಲಿರುವ “ಅಧರ್ಮ” ವನ್ನು ತಡೆಯಲು ಮತ್ತು ಅಂತ್ಯಗೊಳಿಸಲು ದೇವರು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಚಂಡೀಗಢ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಧನ್ಯವಾದ ಅರ್ಪಿಸಿದ ಕೇಜ್ರಿವಾಲ್, ಇದು ದೇಶದ ಪ್ರಜಾಪ್ರಭುತ್ವವನ್ನು ಉಳಿಸಿದೆ ಎಂದು ಹೇಳಿದರು.

ಜನವರಿ 30ರ ಮೇಯರ್ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಿ, ಪರಾಜಿತ ಎಎಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ಕೇಂದ್ರಾಡಳಿತ ಪ್ರದೇಶದ ಹೊಸ ಮೇಯರ್ ಎಂದು ಘೋಷಿಸಿದ ಸುಪ್ರೀಂ ಕೋರ್ಟ್ ತೀರ್ಪು ಶ್ಲಾಘಿಸಿದ ಕೇಜ್ರಿವಾಲ್, “ಸಿಜೆಐ ಮೂಲಕ ದೇವರು ಮಾತನಾಡುತ್ತಿರುವಂತೆ ತೋರುತ್ತಿದೆ” ಎಂದು ಹೇಳಿದರು.

Latest Indian news

Popular Stories