ಜ್ಞಾನೇಶ್ ಕುಮಾರ್, ಸುಖಬೀರ್ ಸಿಂಗ್ ಸಂಧು ಚುನಾವಣಾ ಆಯುಕ್ತರಾಗಿ ನೇಮಕ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಮಾಜಿ ಅಧಿಕಾರಿ ಸುಖಬೀರ್ ಸಿಂಗ್ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ನೂತನ ಚುನಾವಣಾ ಆಯುಕ್ತರಾಗಿ ನೇಮಕ ಮಾಡಿದೆ.

ಈ ಬಗ್ಗೆ ಸಮಿತಿಯ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಗುರುವಾರ ಮಾಹಿತಿ ನೀಡಿದ್ದು, ಇಂದು ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸಭೆ ಮುಗಿದ ಕೂಡಲೇ ತಮ್ಮ ನಿವಾಸದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಚೌಧರಿ, ಇಬ್ಬರು ಚುನಾವಣಾ ಅಯುಕ್ತರ ಆಯ್ಕೆಗೆ ಆರು ಹೆಸರುಗಳು ಬಂದಿದ್ದು, ಸಂಧು ಮತ್ತು ಕುಮಾರ್ ಅವರ ಹೆಸರನ್ನು ಉನ್ನತಾಧಿಕಾರ ಸಮಿತಿಯ ಬಹುಪಾಲು ಸದಸ್ಯರು ಅಂತಿಮಗೊಳಿಸಿದ್ದಾರೆ ಎಂದು ಹೇಳಿದರು.

ಆದಾಗ್ಯೂ, ಭಾರತದ ಮುಖ್ಯ ನ್ಯಾಯಾಧೀಶರು ಆಯ್ಕೆ ಸಮಿತಿಯ ಭಾಗವಾಗಬೇಕಿತ್ತು ಮತ್ತು ಕಾನೂನು ಸಚಿವರ ನೇತೃತ್ವದ ಶೋಧನಾ ಸಮಿತಿಯ ಮುಂದೆ ಬಂದಿದ್ದಾರೆ ಎಂದು ಹೇಳಲಾದ 200 ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಆರು ಹೆಸರುಗಳನ್ನು ಹೇಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದರು.

ಶಾರ್ಟ್‌ಲಿಸ್ಟ್ ಮಾಡಿದ ಆರು ಹೆಸರುಗಳಲ್ಲಿ ಉತ್ಪಲ್ ಕುಮಾರ್ ಸಿಂಗ್, ಪ್ರದೀಪ್ ಕುಮಾರ್ ತ್ರಿಪಾಠಿ, ಜ್ಞಾನೇಶ್ ಕುಮಾರ್, ಇಂದೇವರ್ ಪಾಂಡೆ, ಸುಖಬೀರ್ ಸಿಂಗ್ ಸಂಧು, ಸುಧೀರ್ ಕುಮಾರ್ ಗಂಗಾಧರ್ ರಹಾಟೆ ಇದ್ದು ಎಲ್ಲರೂ ಮಾಜಿ ಅಧಿಕಾರಿಗಳಾಗಿದ್ದಾರೆ. ಆರು ಹೆಸರುಗಳ ಪೈಕಿ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರ ಹೆಸರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲು ಅಂತಿಮಗೊಳಿಸಲಾಗಿದೆ ಎಂದು ಅವರು ಹೇಳಿದರು.

ಗೃಹ ಸಚಿವಾಲಯದಲ್ಲಿ ಅವರ ಅಧಿಕಾರಾವಧಿಯಲ್ಲಿ, ಜ್ಞಾನೇಶ್ ಕುಮಾರ್ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ಕಲ್ಪಿಸುವ 370ನೇ ವಿಧಿಯ ರದ್ದತಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದ್ದರು.

ಫೆಬ್ರವರಿ 14 ರಂದು ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿ ಮತ್ತು ಅರುಣ್ ಗೋಯೆಲ್ ಅವರ ಹಠಾತ್ ರಾಜೀನಾಮೆ ನಂತರ ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿಯಾಗಿದ್ದವು. ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಈ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡುವ ಅನಿವಾರ್ಯತೆ ಕೇಂದ್ರ ಸರ್ಕಾರಕ್ಕೆ ಇತ್ತು.

Latest Indian news

Popular Stories