ರಾಷ್ಟ್ರ ಧ್ವಜ ಸ್ತಂಭದಲ್ಲಿ ಹನುಮಧ್ವಜ ವಿವಾದ: ಜಿಲ್ಲಾಧಿಕಾರಿ ಸಂಧಾನ ಸಭೆ ಯಶಸ್ವಿ, ನಾಳೆ ನಡೆಯಬೇಕಿದ್ದ ‘ಮಂಡ್ಯ ಬಂದ್’ ವಾಪಸ್’

ಮಂಡ್ಯ: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಹೊತ್ತಿಕೊಂಡ ಕೆರೆಗೋಡು ಹನುಮ ಧ್ವಜ ತೆರವು ವಿವಾದ ಸದ್ಯಕ್ಕೆ ತಣ್ಣಗಾದಂತೆ ಕಾಣುತ್ತಿದೆ. ವಿವಾದ ಸಂಬಂಧ ಜಿಲ್ಲಾಧಿಕಾರಿಗಳು ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ನಾಳೆ ನಡೆಯಬೇಕಿದ್ದ ಮಂಡ್ಯ ಬಂದ್​​’ನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಕೆರಗೋಡು ಹನುಮ ಧ್ವಜ ತೆರವು ವಿರೋಧಿಸಿ ಫೆ.9ಕ್ಕೆ ಭಜರಂಗದಳ ಬಂದ್ ಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಭಜರಂಗದಳ ಬಂದ್ ಕರೆ ವಿರೋಧಿಸಿ ಫೆ.7 ಕ್ಕೆ ಸಮಾನ ಮನಸ್ಕರ ವೇದಿಕೆ ಬಂದ್​ಗೆ ಕರೆ ಕೊಟ್ಟಿತ್ತು.

ಸಮಾನ ಮನಸ್ಕರ ವೇದಿಕೆಗೆ ದಲಿತ ಪರ ಸಂಘಟನೆ, ಪ್ರಗತಿಪರರು, ಸಿಐಟಿಯು ಸೇರಿ ಹಲವು ಸಂಘಟನೆಗಳು ಬೆಂಬಲ ನೀಡಿದ್ದರು. ಆದರೆ, ಇದೀಗ ಜಿಲ್ಲಾಡಳಿತ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ಬಂದ್ ಹಿಂಪಡೆದಿದೆ.

ಮಂಡ್ಯ ಡಿಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ ಸಭೆ ನಡೆಸಿ, ಬಂದ್ ನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತೆ. ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ, ಜನ ಸಾಮಾನ್ಯರಿಗೆ ತೊಂದರೆಯಾಗುತ್ತೆ. ಹೀಗಾಗಿ ಸಂಘಟನೆಗಳು ಬಂದ್ ಹಿಂಪಡೆಯಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಜಿಲ್ಲಾಡಳಿತದ ಮನವಿಗೆ ಸಮಾನ ಮನಸ್ಕರ ವೇದಿಕೆ ಸ್ಪಂದಿಸಿದ್ದು ಬಂದ್ ಹಿಂಪಡೆದಿದೆ. ಫೆ.7ರಂದು ಕರೆಕೊಟ್ಟಿದ್ದ ಬಂದ್ ತಾತ್ಕಾಲಿಕ ವಾಪಸ್ಸು ಪಡೆದಿದೆ. ಫೆ.9 ರಂದು ಮಂಡ್ಯ ನಗರ ಬಂದ್​ಗೂ ಅವಕಾಶ ಕೊಡಬೇಡಿ. ಫೆ.9 ರಂದು ಮಂಡ್ಯ ನಗರವನ್ನ ಭಜರಂಗದಳ ಬಂದ್ ಮಾಡಿದರೆ, ಅದನ್ನ ವಿರೋಧಿಸಿ ಮತ್ತೆ ಬಂದ್ ಗೆ ಕರೆಕೊಡುತ್ತೇವೆ ಎಂದು ಸಮಾನ ಮನಸ್ಕರ ವೇದಿಕೆ ಎಚ್ಚರಿಕೆ ನೀಡಿದೆ. ಆದರೆ ಫೆ.9 ರಂದು ಮಂಡ್ಯನಗರ ಬಂದ್ ಮಾಡದ ಬಗ್ಗೆ ಇನ್ನೂ ಭಜರಂಗದಳ ನಿಲುವು ತಿಳಿಸಿಲ್ಲ.

ಏನಿದು ವಿವಾದ?
ಮಂಡ್ಯ ಜಿಲ್ಲೆ ಕೆರಗೋಡು ಎಂಬಲ್ಲಿ ಗ್ರಾಮಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು 108 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಹನುಮ ಧ್ವಜ ವನ್ನು ಹಾರಿಸಿದ್ದರು. ಈ ಧ್ವಜವನ್ನು ತೆರವುಗೊಳಿಸಿದ ಪೊಲೀಸರ ಕ್ರಮ ಈಗ ಟೀಕೆಗೆ ಒಳಗಾಗಿದ್ದು, ಪ್ರತಿಭಟನೆಯೂ ವ್ಯಕ್ತವಾಗಿದೆ.

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ನಿಮಿತ್ತ ಜನವರಿ 22ರಂದು ಕೆರೆಗೋಡು ಗ್ರಾಮಸ್ಥರು ಗ್ರಾಮದ 108 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಲು ತೀರ್ಮಾನಿಸಿದರು. ಗ್ರಾಮ ಪಂಚಾಯಿತಿಗೆ ಈ ಕುರಿತು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ಮೂಲಕ ಮನವಿಯನ್ನೂ ಸಲ್ಲಿಸಿದರು. ಆದರೆ, ಗ್ರಾಮ ಪಂಚಾಯಿತಿಯು “ರಾಷ್ಟ್ರ ಧ್ವಜ ಮತ್ತು ನಾಡಧ್ವಜ” ಹೊರತುಪಡಿಸಿ ಯಾವುದೇ ಧಾರ್ಮಿಕ/ ರಾಜಕೀಯ ಧ್ವಜವನ್ನು ಹಾರಿಸುವಂತಿಲ್ಲ ಎಂಬ ಒಕ್ಕಣೆಯೊಂದಿಗೆ ಜನವರಿ 19ರಂದು ಅನಮತಿ ಪತ್ರ ನೀಡಿದೆ. ಆದಾಗ್ಯೂ, ಗ್ರಾಮಸ್ಥರು ಮತ್ತು ಹಿಂದೂ ಕಾರ್ಯಕರ್ತರು ಹನುಮ ಧ್ವಜವನ್ನು ಹಾರಿಸಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೆ, ಗ್ರಾಮ ಪಂಚಾಯಿತಿಯ ಅಧೀನದ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರ ಗ್ರಾಮ ಪಂಚಾಯತ್​ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. 22 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಹನುಮ ಧ್ವಜ ಹಾರಾಟಕ್ಕೆ 20 ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಬಳಿಕ ಗ್ರಾಮ ಪಂಚಾಯತ್​ ಸದಸ್ಯರು ನಡಾವಳಿ ರಚಿಸಿ, ವಿವಾದ ಇತ್ಯರ್ಥ ಪಡಿಸಿದ್ದರು.

ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಲಾಗಿದೆ ಇದನ್ನು ತೆರವುಗೊಳಿಸಬೇಕು ಎಂದು ಮಂಡ್ಯ ಜಿಲ್ಲಾಡಳಿತವು ತಾಲೂಕು ಆಡಳಿತಕ್ಕೆ ಮೌಖಿಕ ಆದೇಶ ನೀಡಿತ್ತು. ಅದರಂತೆ ಹನುಮ ಧ್ವಜ ತೆರವು ಮಾಡಲು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಅವರು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಆಗಮಿಸಿದ್ದರು. ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಕಾರಣ, ಹನುಮ ಧ್ವಜ ಇಳಿಸದೇ ಅವರು ಶನಿವಾರ (ಜ.27) ರಾತ್ರಿ ಹಿಂದಿರುಗಿದ್ದರು.

ಆದರೆ, ಜನವರಿ 28ರ ನಸುಕಿನ ಜಾವ 3 ಗಂಟೆಗೆ ಗ್ರಾಮಕ್ಕೆ ಮಂಡ್ಯ ಎಸಿ ಶಿವಮೂರ್ತಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಆಗಮಿಸಿ ಧ್ವಜ‌ ತೆರವುಗೊಳಿಸಲು ಯತ್ನಿಸಿದ್ದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದರು. ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರಾದರೂ ಫಲ ನೀಡಲಿಲ್ಲ. ಕೂಡಲೆ ಗ್ರಾಮದಲ್ಲಿ 144 ಸೆಕ್ಷನ್​ ಜಾರಿಗೊಳಿಸಿ, ಗುಂಪು ಚದುರಿಸಲು ಲಾಠಿ ಚಾರ್ಜ್​ ಮಾಡಲಾಯಿತು. ಇಷ್ಟಾದ ಬಳಿಕ ಪೊಲೀಸರು ಹನುಮ ಧ್ವಜವನ್ನು ತೆರವುಗೊಳಿಸಿದರು.

ಇದು ಗ್ರಾಮಸ್ಥರನ್ನು ಕೆರಳಿಸಿತು. ಗ್ರಾಮಸ್ಥರು ಮತ್ತೆ ಬೀದಿಗಿಳಿದು ರಸ್ತೆಯಲ್ಲೇ ಅಡುಗೆ ಮಾಡುತ್ತ ಪ್ರತಿಭಟನೆ ನಡೆಸಲು ಮುಂದಾದರು. ಈ ಹಂತದಲ್ಲಿ ಪೊಲೀಸರು ಗ್ರಾಮಸ್ಥರು ತಂದಿದ್ದ ನೀರನ್ನು ರಸ್ತೆ ಸುರಿದು ಅವರನ್ನು ಚದುರಿಸಲು ಪ್ರಯತ್ನಿಸಿದರು. ಇದೇ ವೇಳೆ, ಗ್ರಾಮಸ್ಥರು ಶಾಸಕ ರವಿಕುಮಾರ್ ಅವರ ಫ್ಲೆಕ್ಸ್‌ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದರು. ಇಷ್ಟಾದ ಬಳಿಕ ಗ್ರಾಮಸ್ಥರು, ಹಿಂದೂ ಕಾರ್ಯಕರ್ತರು ಸಭೆ ನಡೆಸಿ ಮನೆ-ಮನೆಗೆ ಹನುಮ ಧ್ವಜ ನೀಡಿ, ಪ್ರತಿ ಮನೆಯ ಮೇಲೂ ಹನುಮ ಧ್ವಜ ಹಾರಿಸಿದರು.

Latest Indian news

Popular Stories