ಹಾಸನ: ನಿದ್ದೆ ಮಂಪರಿನಲ್ಲಿ ಚಾಲಕ ಕಾರು ಚಲಾಯಿಸಿ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇಂದು ಭಾನುವಾರ ನಸುಕಿನ ಜಾವ ಹಾಸನ ಹೊರವಲಯದ ಈಚನಹಳ್ಳಿ ಬಳಿ ಸಂಭವಿಸಿದೆ. ಕಾರು ಸಂಪೂರ್ಣ ನಜ್ಜುಗುಜ್ಜು ಆಗಿದೆ. ಮೂವರು ಮಹಿಳೆಯರು,ಒಂದು ಮಗು ಹಾಗೂ ಇಬ್ಬರು ಪುರುಷರು ಕಾರಿನಲ್ಲಿದ್ದರು.
ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಹಮದ್ ಸುಜೇತಾ ಭೇಟಿ ನೀಡಿದ್ದಾರೆ. ಕಾರಿನೊಳಗಿಂದ ಶವಗಳನ್ನು ಹೊರತೆಗೆಯಲು ಪೊಲೀಸರು ಕಷ್ಟಪಟ್ಟರು.
ಚಿಕ್ಕಬಳ್ಳಾಪುರ ಮೂಲದ ಆರು ಜನ, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ಭೇಟಿಯಾಗಿ, ವಾಪಸ್ ಊರಿಗೆ ಹೋಗುತ್ತಿದ್ದರು. ನಸುಕಿನ ಜಾವ ಈಚನಹಳ್ಳಿ ಬಳಿ ನಿದ್ದೆ ಮಂಪರಿನಲ್ಲಿ ಅಪಘಾತ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಕಾರು ಮನೋಜ್ ಕುಮಾರ್ ಎಂಬುವರಿಗೆ ಸೇರಿದೆ. ಕಾರು ಹಾಗೂ ಕಾರಿನಲ್ಲಿ ಇದ್ದವರ ಬಗ್ಗೆ ತಕ್ಷಣ ವಿಳಾಸ ಪತ್ತೆ ಹಚ್ಚುವಂತೆ ಚಿಕ್ಕಬಳ್ಳಾಫುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿಎಲ್ ನಾಗೇಶ ಹಾಗೂ ಆರ್ಟಿಒ ಅಧಿಕಾರಿಗಳಿಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮನವಿ ಮಾಡಿದ್ದಾರೆ.