ತೈಲ ಬೆಲೆ ಏರಿಕೆ ಪ್ರತಿಭಟನೆ ವೇಳೆ ಹೃದಯಾಘಾತ: BJP ಮಾಜಿ MLC ಎಂ.ಬಿ ಭಾನುಪ್ರಕಾಶ್ ನಿಧನ

ಶಿವಮೊಗ್ಗ: ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದ್ದಾರೆ.

ನಗರದ ಗೋಪಿ ಸರ್ಕಲ್‍ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಭಾಗಿಯಾಗಿದ್ದರು.

ಪ್ರತಿಭಟನೆ ವೇಳೆ ತೀವ್ರ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಇದುಗ ಭಾನುಪ್ರಕಾಶ್ ಅವರ ಮೃತದೇಹವನ್ನು ಸ್ವಗ್ರಾಮ ಮತ್ತೂರಿಗೆ ರವಾನೆ ಮಾಡಲಾಗಿದೆ.

ಈ ನಡುವೆ ಭಾನುಪ್ರಕಾಶ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ವಿಧಾನ ಪರಿಷತ್ ಮಾಜಿ ಸದಸ್ಯರೂ ಸಂಘಟನೆಯ ಹಿರಿಯ ಮಾರ್ಗದರ್ಶಕರೂ ಆಗಿದ್ದ ಮಾನ್ಯ ಭಾನುಪ್ರಕಾಶ್ ಅವರ ಅನಿರೀಕ್ಷಿತ ಸಾವು ಸಂಘ ಪರಿವಾರ ಹಾಗೂ ಪಕ್ಷದ ಕಾರ್ಯಕರ್ತರ ವಲಯಕ್ಕೆ ಅತೀವ ಆಘಾತವನ್ನುಂಟು ಮಾಡಿದೆ. ಸಂಘಟನೆಯ ಕುರಿತು ಕಾಲ ಕಾಲಕ್ಕೆ ನನಗೆ ಸೂಕ್ತ ತಿಳುವಳಿಕೆ ನೀಡುತ್ತಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ಅಪಾರ ನೋವನ್ನುಂಟು ಮಾಡಿದೆ.

ತಮ್ಮ ಇಡೀ ಜೀವನವನ್ನು ಸಂಘ ಮತ್ತು ಸಂಘಟನೆಗೆ ಸಮರ್ಪಿಸಿಕೊಂಡಿದ್ದ ಭಾನುಪ್ರಕಾಶ್ ಜೀ ಅವರು ಇಂದಿನ ಪೀಳಿಗೆಯ ರಾಷ್ಟ್ರ ಭಕ್ತರಿಗೆ ಮಾದರಿಯಾಗಿದ್ದರು. ಅವರ ಕುಟುಂಬವೂ ಸಹ ಸಂಘದ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿತ್ತು, ತಮ್ಮ ಕುಟುಂಬ ಬೇರೆಯಲ್ಲ ಸಂಘ ಪರಿವಾರ ಬೇರೆಯಲ್ಲ ಎಂದು ತಮ್ಮ ಜೀವನ ಶೈಲಿಯನ್ನು ತ್ಯಾಗದ ಪ್ರತಿರೂಪವಾಗಿ ಸಮರ್ಪಿಸಿಕೊಂಡು ಕ್ರಿಯಾಶೀಲರಾಗಿದ್ದ ಅವರು ವಿಧಾನಪರಿಷತ್ತಿನ ಸದಸ್ಯರಾಗಿಯೂ ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಪಾರದರ್ಶಕವಾಗಿ ಎತ್ತಿ ಹಿಡಿಯಲು ಪ್ರಾಮಾಣಿಕವಾಗಿ ಪರಿಶ್ರಮಿಸಿದ್ದರು.

ಭಾನುಪ್ರಕಾಶ್ ಅವರು ಸಂಘಟನೆ ಹಾಗೂ ಹೋರಾಟದ ಸಮಯದಲ್ಲೇ ಅಸುನೀಗುವ ಮೂಲಕ ಸಂಘ ಪರಿವಾರದ ತ್ಯಾಗ ಬಲಿದಾನಗೈದ ಮಹಾನ್ ವ್ಯಕ್ತಿಗಳ ಸಾಲಿಗೆ ಸೇರ್ಪಡೆಗೊಂಡು ಇತಿಹಾಸ ಪುಟಗಳಲ್ಲಿ ಸೇರಿ ಹೋದರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುವೆ.

ಒಬ್ಬ ಅಪರೂಪದ ಸರಳ, ಸಜ್ಜನ, ಪರಿಶುಭ್ರ ವ್ಯಕ್ತಿತ್ವದ ಭಾನುಪ್ರಕಾಶ್ ಅವರ ಇನ್ನಿಲ್ಲದಿರುವಿಕೆ ಪರಿವಾರ ಹಾಗೂ ಪಕ್ಷದ ವಲಯದಲ್ಲಿ ಶೂನ್ಯ ಆವರಿಸಲು ಕಾರಣವಾಗಿದೆ. ಅವರು ನಮ್ಮೊಂದಿಗೆ ಭವಿಷ್ಯತ್ತಿನಲ್ಲಿ ಭೌತಿಕವಾಗಿ ಇಲ್ಲದಿರಬಹುದು, ಆದರೆ ಅವರು ನೀಡಿದ ಪ್ರೇರಣೆ, ಹೋರಾಟ, ಮಾರ್ಗದರ್ಶನ ಸದಾ ನಮ್ಮ ಬೆನ್ನಿಗೆ ನಿಂತು ಭವಿಷ್ಯತ್ತಿನಲ್ಲೂ ಪ್ರೇರಣೆಯ ಶಕ್ತಿಯಾಗಿರಲಿದೆ ಎಂದು ಹೇಳಿದ್ದಾರೆ.

Latest Indian news

Popular Stories