ಬೆಂಗಳೂರು: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ(ಕೆಎಸ್‌ಎನ್‌ಡಿಎಂಸಿ) ಕರಾವಳಿ ಕರ್ನಾಟಕಕ್ಕೆ ರೆಡ್ ಅಲರ್ಟ್ ಘೋಷಿಸಿದ್ದು, ಜೂನ್ 22 ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ರಾಜ್ಯದಾದ್ಯಂತ ಬಹುತೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಮತ್ತು ಬಿರುಗಾಳಿ(30-40 ಕಿಮೀ) ಬೀಸುವ ಸಾಧ್ಯತೆಯಿದೆ ಎಂದು ಕೆಎಸ್‌ಎನ್‌ಡಿಎಂಸಿ ಎಚ್ಚರಿಕೆ ನೀಡಿದೆ.
ಕೆಎಸ್‌ಎನ್‌ಡಿಎಂಸಿ ಸಲಹೆಯ ಪ್ರಕಾರ, ಜೂನ್ 23 ರಿಂದ ಜೂನ್ 26 ರವರೆಗೆ ಕೃಷ್ಣಾ ಜಲಾನಯನ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ.
ಇನ್ನು ಭಾರತದ ಹವಾಮಾನ ಇಲಾಖೆ(IMD) ಸಹ ಹವಾಮಾನ ಮುನ್ಸೂಚನೆಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ ಒಳನಾಡಿನ ಕರಾವಳಿ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ನೈಋತ್ಯ ಮಾನ್ಸೂನ್ ಮಹಾರಾಷ್ಟ್ರದ ಇನ್ನೂ ಕೆಲವು ಭಾಗಗಳಿಗೆ ಮುಂದುವರೆದಿದ್ದರೂ, ವಿದರ್ಭದ ಉಳಿದ ಭಾಗಗಳು, ಮಧ್ಯಪ್ರದೇಶದ ಕೆಲವು ಭಾಗಗಳು, ಛತ್ತೀಸ್ಗಢ ಮತ್ತು ಒಡಿಶಾದ ಕೆಲವು ಭಾಗಗಳು, ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ಜೂನ್ 21 ರಿಂದ ಜೂನ್ 25 ರ ನಡುವೆ ಸಾಧಾರಣ ಮಳೆಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ವಾಸ್ತವವಾಗಿ, ಜೂನ್ 23 ರಿಂದ ರಾಜ್ಯದಾದ್ಯಂತ ಭಾರೀ ಮಳೆ ಮತ್ತು ವ್ಯಾಪಕ ಮಳೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಐಎಂಡಿ ಬೆಂಗಳೂರು ನಿರ್ದೇಶಕ ಸಿ ಎಸ್ ಪಾಟೀಲ್ ಹೇಳಿದ್ದಾರೆ.