ಹಿಮಾಚಲ ಪ್ರದೇಶ: ಸಚಿವ ಸ್ಥಾನಕ್ಕೆ ವಿಕ್ರಮಾದಿತ್ಯ ರಾಜೀನಾಮೆ: ಕೈ ಸರಕಾರ ಸಂಕಷ್ಟದಲ್ಲಿ

ಶಿಮ್ಲಾ: ಹಿಮಾಚಲ ಪ್ರದೇಶದ ಏಕೈಕ ರಾಜ್ಯಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಬಿಜೆಪಿಯ ಹರ್ಷ್ ಮಹಾಜನ್ ವಿರುದ್ಧ ಸೋಲನುಭವಿಸಿದ ನಂತರ ಕಾಂಗ್ರೆಸ್ ಸರಕಾರದಲ್ಲಿ ಭಾರೀ ಬಿಕ್ಕಟ್ಟು ತಲೆದೋರಿರುವ ನಡುವೆ, ಆರು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ , ಬುಧವಾರ ಲೋಕೋಪಯೋಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

34ರ ಹರೆಯದ ವಿಕ್ರಮಾದಿತ್ಯ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರ ಸಂಪುಟದಿಂದ ಹೊರ ಬಂದಿರುವುದು ಕಾಂಗ್ರೆಸ್ ಗೆ ಭಾರೀ ಹೊಡೆತ ನೀಡಿದೆ. ಬಜೆಟ್ ಮಂಡನೆಯಾಗಲಿರುವ ವಿಧಾನಸಭೆ ಅಧಿವೇಶನದ ಕೆಲವೇ ಕ್ಷಣಗಳ ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

”ಸದ್ಯದ ಪರಿಸ್ಥಿತಿಯಲ್ಲಿ ಸಚಿವರಾಗಿ ಮುಂದುವರಿಯುವುದು ಒಳ್ಳೆಯದಲ್ಲ. ಮುಂದಿನ ದಿನಗಳಲ್ಲಿ ನನ್ನ ಬೆಂಬಲಿಗರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿ ನನ್ನ ಮುಂದಿನ ಕ್ರಮವನ್ನು ನಿರ್ಧರಿಸುತ್ತೇನೆ. ಶಿಷ್ಟಾಚಾರದ ಪ್ರಕಾರ ನಾನು ನನ್ನ ರಾಜೀನಾಮೆಯನ್ನು ಮುಖ್ಯಮಂತ್ರಿ, ರಾಜ್ಯಪಾಲರಿಗೆ ಹಸ್ತಾಂತರಿಸುತ್ತಿದ್ದೇನೆ. ನಾನು ಸರಿಯಾದ ವಿಷಯಗಳನ್ನು ಬೆಂಬಲಿಸುತ್ತಾ ಮತ್ತು ತಪ್ಪುಗಳನ್ನು ವಿರೋಧಿಸುತ್ತಾ ಮುಂದುವರಿಯುತ್ತೇನೆ” ಎಂದು ಹೇಳಿದ್ದಾರೆ.
68 ಸದಸ್ಯಬಲದ ಹಿಮಾಚಲ ವಿಧಾನಸಭೆಯಲ್ಲಿ9 ಶಾಸಕರು ಅಡ್ಡಮತದಾನ ಮಾಡಿದ ಪರಿಣಾಮ ಕಾಂಗ್ರೆಸ್‌ ಬಲ 34ಕ್ಕೆ ಕುಸಿದಿದೆ. ವಿಧಾನಸಭೆಯಲ್ಲಿ ಬಹುಮತಕ್ಕೆ 35 ಸದಸ್ಯರ ಬೆಂಬಲ ಅಗತ್ಯವಾಗಿದ್ದು. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂಘ್ವಿ ವಿರುದ್ಧ ಕಾಂಗ್ರೆಸ್‌ ನ ಆರು ಶಾಸಕರು ಅಡ್ಡಮತದಾನ ಮಾಡಿದ್ದರಿಂದ ಬಿಜೆಪಿ ಹರ್ಷ ಮಹಾಜನ್‌ ಜಯಗಳಿಸಿದ್ದಾರೆ

25ಶಾಸಕರನ್ನು ಹೊಂದಿರುವ ಬಿಜೆಪಿ, ಮೂವರು ಪಕ್ಷೇತರರು, ಆರು ಕಾಂಗ್ರೆಸ್‌ ಬಂಡಾಯ ಶಾಸಕರೊಂದಿಗೆ ಹೊಸ ಸರಕಾರ ರಚಿಸಲು ಕಸರತ್ತು ನಡೆಸಿದೆ. ಹಿಮಾಚಲ ಪ್ರದೇಶ ಮಾಜಿ ಸಿಎಂ, ಬಿಜೆಪಿ ಮುಖಂಡ ಜೈರಾಮ್‌ ಠಾಕೂರ್‌ ಬುಧವಾರ ರಾಜ್ಯಪಾಲ ಶಿವಪ್ರತಾಪ್‌ ಶುಕ್ಲಾ ಅವರನ್ನು ಭೇಟಿಯಾಗಿ ನೂತನ ಸರಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿರುವುದಾಗಿ ವರದಿಯಾಗಿದೆ.

Latest Indian news

Popular Stories