ತಾಜ್ ಮಹಲ್ ನಲ್ಲಿ ಷಹಜಹಾನ್ ತಲಾಂತರದ ಉರುಸ್ ಆಚರಣೆಗೆ ತಡೆ ಕೋರಿ ಕೋರ್ಟ್ ಮೆಟ್ಟಿಲೇರಿದ ಹಿಂದೂ ಮಹಾಸಭಾ

ಹೊಸದಿಲ್ಲಿ: ಮೊಘಲ್ ಚಕ್ರವರ್ತಿ ಷಹಜಹಾನ್ ಅವರ 369ನೇ ‘ಉರುಸ್’ ತಾಜ್ ಮಹಲ್‌ನಲ್ಲಿ ನಡೆಯಲಿರುವ ಮೂರು ದಿನಗಳ ಮೊದಲು, ಹಿಂದೂ ಸಂಘಟನೆಯೊಂದು ಆಗ್ರಾ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅದಕ್ಕೆ ನಿಷೇಧಿಸುವಂತೆ ಕೋರಿದೆ.

ಅರ್ಜಿದಾರರಾದ ಅಖಿಲ ಭಾರತ ಹಿಂದೂ ಮಹಾಸಭಾ ಉರುಸ್ ಗಾಗಿ ತಾಜ್ ಮಹಲ್ ಒಳಗೆ ಉಚಿತ ಪ್ರವೇಶವನ್ನು ಕೂಡಾ ಪ್ರಶ್ನಿಸಿದೆ.
ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯವು ಮಾರ್ಚ್ 4 ರಂದು ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಿದೆ.
ಹಿಂದೂ ಸಂಘಟನೆಯ ರಾಷ್ಟ್ರೀಯ ವಕ್ತಾರ ಸಂಜಯ್ ಜಾಟ್ ಅವರು, “ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಮಾಹಿತಿ ಹಕ್ಕು (ಆರ್‌ಟಿಐ) ಅಡಿಯಲ್ಲಿ ಮಾಹಿತಿ ಕೇಳಿದ್ದೇನೆ. ಮೊಘಲರು, ಅಥವಾ ಬ್ರಿಟಿಷ್ ಸರ್ಕಾರ, ಅಥವಾ ಭಾರತ ಸರ್ಕಾರದಿಂದ ‘ಉರುಸ್’ ಸ್ಮರಣಾರ್ಥ ನಡೆಸಲು ಯಾವುದೇ ಅನುಮತಿ ಇದೆಯೇ ಪ್ರಶ್ನಿಸಿದ್ದೆ. ಉರುಸ್ ಸಂಘಟನಾ ಸಮಿತಿಗೆ ಅಂತಹ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಪುರಾತತ್ವ ಇಲಾಖೆ ಪ್ರತಿಕ್ರಿಯಿಸಿದೆ. ಹೀಗಾಗಿ ಅಖಿಲ ಭಾರತ ಹಿಂದೂ ಮಹಾಸಭಾ ಈ ಪದ್ಧತಿಗೆ ಕಡಿವಾಣ ಹಾಕುವಂತೆ ನ್ಯಾಯಾಲಯದ ಮೊರೆ ಹೋಗಿದೆ” ಎಂದರು.

ಮೂರು ದಿನಗಳ ಉರುಸ್ ಕಾರ್ಯಕ್ರಮವು ಈ ವರ್ಷ ಫೆಬ್ರವರಿ 6 ರಿಂದ ಫೆಬ್ರವರಿ 8 ರವರೆಗೆ ನಡೆಯಲಿದೆ.

ಹಿಂದೂ ಮಹಾಸಭಾದ ವಿಭಾಗೀಯ ಅಧ್ಯಕ್ಷೆ ಮೀನಾ ದಿವಾಕರ್ ಮತ್ತು ಜಿಲ್ಲಾಧ್ಯಕ್ಷ ಸೌರಭ್ ಶರ್ಮಾ ಮಾತನಾಡಿ, ಎಎಸ್‌ಐ ಸ್ಮಾರಕಗಳ ಒಳಗೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಿಲ್ಲ ಹೀಗಾಗಿ ‘ಉರುಸ್’ ನಡೆಸುವುದು ಕಾನೂನು ಬಾಹಿರ ಎಂದಿದ್ದಾರೆ.
ಹಿಂದೂ ಮಹಾಸಭಾವು ಕಾಶಿ ವಿಶ್ವನಾಥ ಮತ್ತು ಕೃಷ್ಣ ಜನ್ಮಭೂಮಿಯಲ್ಲಿ ಆದೇಶಿಸಿದ ಮಾದರಿಯಲ್ಲಿ ತಾಜ್ ಮಹಲ್ ಆವರಣದ ಸಮೀಕ್ಷೆಗೆ ಮನವಿ ಸಲ್ಲಿಸಲು ಉದ್ದೇಶಿಸಿದೆ ಎಂದು ಸೌರಭ ಶರ್ಮಾ ಹೇಳಿದರು.

Latest Indian news

Popular Stories