ನವದೆಹಲಿ:
ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ನಂತರ ಅವಾಮಿ ಲೀಗ್ ನ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಲಕ್ಷಾಂತರ ಹಿಂದೂಗಳು ಬಾಂಗ್ಲಾದೇಶದಲ್ಲಿ ಶನಿವಾರ ಬೀದಿಗಿಳಿದಿದ್ದರು.ಪ್ರತಿಭಟನಾಕಾರರ ಪರವಾಗಿ ಮುಸ್ಲಿಮ್ ವಿದ್ಯಾರ್ಥಿಗಳು ಸಾಥ್ ನೀಡಿದರು.
ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ದೇಶದ ಎರಡನೇ ಅತಿದೊಡ್ಡ ನಗರವಾದ ಚಿತ್ತಗಾಂಗ್ ನಲ್ಲಿ ಬೃಹತ್ ರ್ಯಾಲಿಗಳಿಗೆ ಲಕ್ಷಾಂತರ ಜನರು ಸಾಕ್ಷಿಯಾದರು.
ಅಲ್ಪಸಂಖ್ಯಾತ ಸಮುದಾಯಗಳು ಹಸೀನಾ ನೇತೃತ್ವದ ಸರ್ಕಾರ ಪತನದ ನಂತರ 52 ಜಿಲ್ಲೆಗಳಲ್ಲಿ 205 ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿಗೆ ಒಳಗಾಗಿತ್ತು. ದಾಳಿಗೊಳಗಾದ ಹೆಚ್ಚಿನವರು ಅವಾಮಿ ಲೀಗ್ ಹಿನ್ನಲೆಯವರಾಗಿದ್ದರು ಎಂದು ವರದಿಯಾಗಿದೆ.
ಕೆಲವೊಂದು ಹಿಂದೂ ದೇವಾಲಯಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.ಹಸೀನಾ ಅವರ ಅವಾಮಿ ಲೀಗ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಕನಿಷ್ಠ ಇಬ್ಬರು ಹಿಂದೂ ನಾಯಕರು ಇತರರೊಂದಿಗೆ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದಾರೆ.
ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮುಸ್ಲಿಂ ಪ್ರತಿಭಟನಾಕಾರರು ಅಲ್ಪಸಂಖ್ಯಾತರ ಪರವಾಗಿ ಒಗ್ಗಟ್ಟು ಪ್ರದರ್ಶಿಸಿ ಬೀದಿಗಿಳಿದಿದ್ದಾರೆ.
ಬಾಂಗ್ಲಾದೇಶದ ಹಂಗಾಮಿ ನಾಯಕ ಮುಹಮ್ಮದ್ ಯೂನಸ್ ಶನಿವಾರ ಹಿಂಸಾಚಾರ ಪೀಡಿತ ರಾಷ್ಟ್ರದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. “ಹೇಯ” ಕೃತ್ಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ನೊಬೆಲ್ ಪ್ರಶಸ್ತಿ ವಿಜೇತರಾದ ಯೂನಸ್ ಅವರು ಪ್ರತಿಭಟನೆಯ ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳನ್ನು ಎಲ್ಲಾ ಹಿಂದೂ, ಕ್ರಿಶ್ಚಿಯನ್ ಮತ್ತು ಬೌದ್ಧ ಕುಟುಂಬಗಳನ್ನು ಹಾನಿಯಿಂದ ರಕ್ಷಿಸುವಂತೆ ಆಗ್ರಹಿಸಿದ್ದಾರೆ.
“ಅವರು ಈ ದೇಶದ ಜನರಲ್ಲವೇ? ನೀವು ದೇಶವನ್ನು ಉಳಿಸಲು ಸಾಧ್ಯವಾಯಿತು; ನೀವು ಕೆಲವು ಕುಟುಂಬಗಳನ್ನು ಉಳಿಸಲು ಸಾಧ್ಯವಿಲ್ಲವೇ? … ನೀವು ಹೇಳಬೇಕು – ಯಾರೂ ಅವರಿಗೆ ಹಾನಿ ಮಾಡಲಾರರು. ಅವರು ನನ್ನ ಸಹೋದರರು; ನಾವು ಒಟ್ಟಿಗೆ ಹೋರಾಡಿದ್ದೇವೆ ಮತ್ತು ನಾವು ಒಟ್ಟಿಗೆ ಇರುತ್ತೇವೆ, ”ಎಂದು ರಾಷ್ಟ್ರೀಯ ಏಕತೆಯ ಅಗತ್ಯವನ್ನು ಒತ್ತಿಹೇಳಿದರು.