ಬೆಂಗಳೂರು: ಮುಡಾ ಸೈಟ್ ಕೇಸಿನಲ್ಲಿ ತಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಪ್ರಕರಣ ದಾಖಲಾಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದು ಯಾವ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಎಂಬುದು ನನಗೆ ಗೊತ್ತಿಲ್ಲ. ಬಹುಶಃ ನಿಮಗೂ ಹಾಗೆಯೇ ಅನಿಸುತ್ತಿರಬಹುದು. ನನ್ನ ಪ್ರಕಾರ, ಪರಿಹಾರದ ಸೈಟ್‌ಗಳನ್ನು ನೀಡಿದ್ದರಿಂದ ಅದು ಮನಿ ಲಾಂಡ್ರಿಂಗ್ ಕೇಸು ಆಗುವುದಿಲ್ಲ, ಇದರಲ್ಲಿ ನನ್ನ ಪಾತ್ರ ಏನಿದೆ ಎಂದು ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ದಿಂದ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ 14 ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ವಿರುದ್ಧ ಪೊಲೀಸರು ಎಫ್‌ಐಆರ್‌ಗೆ ಸಮನಾದ ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿಯನ್ನು (ECIR) ಇಡಿ ದಾಖಲಿಸಿದೆ.
ಇಸಿಐಆರ್‌ನಲ್ಲಿ ಮುಖ್ಯಮಂತ್ರಿ ಮತ್ತು ಇತರರ ವಿರುದ್ಧ ಇಡಿ ಪಿಎಂಎಲ್‌ಎಯ ಸಂಬಂಧಿತ ವಿಭಾಗಗಳನ್ನು ಅನ್ವಯಿಸಿದೆ.
ರಾಜೀನಾಮೆ ನೀಡುವುದಿಲ್ಲ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡುವ ಸಾಧ್ಯತೆಯನ್ನೂ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದ್ದಾರೆ. ನಾನು ಆತ್ಮಸಾಕ್ಷಿಯೊಂದಿಗೆ ಕೆಲಸ ಮಾಡುತ್ತೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ನನ್ನ ಆತ್ಮಸಾಕ್ಷಿ ಹೇಳುತ್ತಿದೆ. ಹಾಗಾಗಿ ನಾನು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದರು.
ಮುಡಾ ಸೈಟ್ ಕೇಸಿನಲ್ಲಿ ನನ್ನ ಪಾತ್ರ ಏನೂ ಇಲ್ಲ, ಆದರೂ ಇಷ್ಟೊಂದು ಕಾಂಟ್ರವರ್ಸಿ ಆಗಿದೆ, ಹೀಗಾಗಿ ಮನನೊಂದು ನನ್ನ ಪತ್ನಿ ನಿವೇಶನ ಹಿಂತಿರುಗಿಸುವ ತೀರ್ಮಾನ ಮಾಡಿ ಪತ್ರ ಬರೆದಿದ್ದಾರೆ ಎಂದರು.
ನನ್ನ ಪತ್ನಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದು, ನನ್ನ ಜೊತೆ ಚರ್ಚೆ ಮಾಡಿಲ್ಲ, ಮುಡಾದವರಿಗೆ ಪತ್ರ ಕಳುಹಿಸಿದ ನಂತರವೇ ನನಗೆ ಗೊತ್ತಾಗಿದ್ದು. ಅವರ ಅಣ್ಣ ಮಲ್ಲಿಕಾರ್ಜುನ ಸ್ವಾಮಿ 3 ಎಕ್ರೆ 16 ಗುಂಟೆ ಜಮೀನು ನನ್ನ ಪತ್ನಿಗೆ ನೀಡಿದ್ದು, ನಂತರ ಆಕೆ ಮಾಲಿಕಳಾದ್ದಳು. ಮುಡಾದವರು ಜಮೀನು ವಶಪಡಿಸಿಕೊಂಡು ನಿವೇಶನ ಮಾಡಿ ಹಂಚಿದ್ದರು. ಅದಕ್ಕೆ ಬದಲಿ ನಿವೇಶನ ನೀಡಿ ಎಂದು ಕೇಳಿದಾಗ ವಿಜಯನಗರ 3 ಮತ್ತು 4ನೇ ಹಂತದಲ್ಲಿ 14 ಸೈಟ್ ನೀಡಿದರು. ನಾವು ವಿಜಯನಗರದಲ್ಲಿಯೇ ನೀಡಬೇಕೆಂದು ಕೇಳಿರಲಿಲ್ಲ. ನಮಗೆ ಬದಲಿ ನಿವೇಶನ ಕೊಡಿ ಎಂದು ಕೇಳಿದ್ದೆವು ಅಷ್ಟೆ, ಅದೀಗ ದೊಡ್ಡ ವಿವಾದವಾಗಿದೆ ಅಷ್ಟೆ ಎಂದರು.
ಇಷ್ಟೊಂದು ವಿವಾದಗಳಿಂದ, ವಿರೋಧ ಪಕ್ಷಗಳ ಕುತಂತ್ರಗಳಿಗೆ ನನ್ನ ಪತ್ನಿ ಬಲಿಯಾಗಿದ್ದಾಳೆ ಅಷ್ಟೆ ಎಂದರು.