ಭಾರತದ ಶ್ರೀಮಂತ ಗೌತಮ್ ಅದಾನಿ ಗ್ರೂಪ್‌ನ ಷೇರುಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷ ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ಬಹಿರಂಗಪಡಿಸಿದ್ದ ವರದಿ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಅದಾನಿ ಗ್ರೂಪ್‌ಗೆ ಸಂಬಂಧಿಸಿದ ವಿಚಾರದಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್ ಮತ್ತೊಂದು ವರದಿಯನ್ನು ಬಿಡುಗಡೆ ಮಾಡಿದ್ದು ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಆಫ್‌ಶೋರ್ ಫಂಡ್‌ನಲ್ಲಿ ಪಾಲನ್ನು ಹೊಂದಿದ್ದರು ಎಂದು ಆರೋಪಿಸಿದೆ.
ಅಮೆರಿಕಾದ ಶಾರ್ಟ್ ಸೆಲ್ಲರ್ ಸಂಸ್ಥೆಯು ಇಂದಿನ ಪೋಸ್ಟ್‌ನಲ್ಲಿ, ‘ಭಾರತದಲ್ಲಿ ಶೀಘ್ರದಲ್ಲೇ ದೊಡ್ಡದೊಂದು ಸಂಭವಿಸುತ್ತದೆ’ ಎಂದು ಬರೆದುಕೊಂಡಿತ್ತು. ಇದು ದೇಶದಲ್ಲಿ ಭಾರೀ ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಇದೀಗ ವರದಿ ಬಿಡುಗಡೆ ಮಾಡಿದ್ದು ಅದಾನಿ ಗ್ರೂಪ್ ಮತ್ತು ಸೆಬಿ ಮುಖ್ಯಸ್ಥರ ನಡುವೆ ಸಂಬಂಧವಿದೆ ಎಂದು ಹಿಂಡೆನ್‌ಬರ್ಗ್ ಈ ವರದಿಯಲ್ಲಿ ಹೇಳಿಕೊಂಡಿದೆ. ಅದಾನಿ ಮನಿ ಸೈಫನಿಂಗ್ ಹಗರಣದಲ್ಲಿ ಬಳಸಲಾದ ಕಡಲಾಚೆಯ ಘಟಕಗಳಲ್ಲಿ ಸೆಬಿ ಅಧ್ಯಕ್ಷ ಮಾಧಬಿ ಪುರಿ ಬುಚ್ ಪಾಲು ಹೊಂದಿದ್ದಾರೆ ಎಂದು ವಿಸ್ಲ್‌ಬ್ಲೋವರ್‌ನಿಂದ ಪಡೆದ ದಾಖಲೆಗಳು ತೋರಿಸುತ್ತವೆ ಎಂದು ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಿಸಿದೆ.
ಹಿಂಡೆನ್‌ಬರ್ಗ್ ರಿಸರ್ಚ್ ವಿಸ್ಲ್‌ಬ್ಲೋವರ್ ದಾಖಲೆಗಳನ್ನು ಉಲ್ಲೇಖಿಸಿ, ವರದಿಯಲ್ಲಿ ಮಾಧಬಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ಅವರು 2015ರ ಜೂನ್ 5ರಂದು ಸಿಂಗಾಪುರದಲ್ಲಿ ಐಪಿಇ ಪ್ಲಸ್ ಫಂಡ್ 1 ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ ಎಂದು ಬರೆದಿದ್ದಾರೆ. ಇದರಲ್ಲಿ ದಂಪತಿಗಳ ಒಟ್ಟು ಹೂಡಿಕೆಯು 10 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಆಫ್‌ಶೋರ್ ಮಾರಿಷಸ್ ನಿಧಿಯನ್ನು ಅದಾನಿ ನಿರ್ದೇಶಕರು ಇಂಡಿಯಾ ಇನ್ಫೋಲೈನ್ ಮೂಲಕ ಸ್ಥಾಪಿಸಿದ್ದಾರೆ. ಹೆಚ್ಚು ತೆರಿಗೆ ವಿನಾಯ್ತಿ ಸಿಗುವ ಮಾರಿಷಸ್‌ನಲ್ಲಿ ನೋಂದಾಯಿಸಲಾಗಿದೆ ಎಂದು ಹಿಂಡೆನ್‌ಬರ್ಗ್ ಆರೋಪಿಸಿದೆ. ಸೆಬಿ ಅಧ್ಯಕ್ಷರಾದ ಮಾಧಬಿ ಪುರಿ ಬುಚ್ ಮತ್ತು ಅದಾನಿ ಗ್ರೂಪ್ ನಡುವೆ ಕೆಲವು ಸಂಪರ್ಕವಿದೆ ಎಂದು ತಿಳಿಯಬಹುದು.
2023ರ ಜನವರಿಯಲ್ಲಿ ಹಿಂಡೆನ್‌ಬರ್ಗ್ ರಿಸರ್ಚ್ ಬಿಲಿಯನೇರ್ ಗೌತಮ್ ಅದಾನಿಯ ಅದಾನಿ ಗ್ರೂಪ್ ಅನ್ನು ಗುರಿಯಾಗಿಟ್ಟುಕೊಂಡು ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿತ್ತು. ಇದರ ನಂತರ ಅದಾನಿ ಸಮೂಹದ ಷೇರುಗಳು ಸುಮಾರು 86 ಶತಕೋಟಿ ಡಾಲರ್ ಗಳಷ್ಟು ಕುಸಿಯಿತು. ಅದಾನಿ ಪ್ರಕರಣದ ಕುರಿತಂತೆ ತನಿಖೆ ಕೈಗೊಂಡಿದ್ದ ಸೆಬಿ ಹಿಂಡೆನ್‌ಬರ್ಗ್‌ಗೆ ನೋಟಿಸ್ ಕೂಡ ನೀಡಿತ್ತು.