ಬೆಂಗಳೂರು ನಗರತ್ ಪೇಟೆಯಲ್ಲಿ ಹೈಡ್ರಾಮಾ: ತೇಜಸ್ವಿ ಸೂರ್ಯ ಸೇರಿ ಹಲವು ಹಿಂದೂ ಪರ ಕಾರ್ಯಕರ್ತರು ವಶಕ್ಕೆ

ನಗರತ್​ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಲೌಡ್ ಸ್ಪೀಕರ್ ವಿಚಾರದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ನಗರದಲ್ಲಿಂದು ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾದರು.

ಘಟನೆಗೆ ಖಂಡನೆ ವ್ಯಕ್ತಪಡಿಸಿರುವ ಹಿಂದೂಪರ ಸಂಘಟನೆಗಳು ಇಂದು ಹಲ್ಲೆಗೊಳಗಾದ ಯುವಕ ಮುಖೇಶ್ ಅಂಗಡಿಯಿಂದ ಭಾಗವಧ್ವಜದೊಂದಿಗೆ ಹನುಮಾನ್ ಚಾಲೀಸ ಪಠಣ ಮಾಡಿಕೊಂಡು ಅನುಮತಿಯಿಲ್ಲದೆ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ.

ಈ ಮೆರವಣಿಗೆಗೆ ಬಿಜೆಪಿ ನಾಯಕರಾದ ಸುರೇಶ್ ಕುಮಾರ್ ಹಾಗೂ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಅವರು ಕೂಡ ಭಾಗಿಯಾಗಿದ್ದರು. ಚುನಾವಣೆಯ ನೀತಿ ಸಂಹಿತೆಯ ಕಾರಣ ಇದಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯಿತು.

ನೀತಿ ಸಂಹಿತೆ ಜಾರಿಯಾಗಿದೆ ಪ್ರತಿಭಟನೆ ಮಾಡಲು ಅವಕಾಶ ಇಲ್ಲ ಎಂದು ಪೊಲೀಸರು ಹೇಳಿದರು. ಇದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು, ತೇಜಸ್ವಿ ಸೂರ್ಯ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಈ ಪ್ರಕರಣದಲ್ಲಿ ಕೋಮು ಆಯಾಮವಿಲ್ಲ ಎಂದು ಈಗಾಗಲೇ ಪೊಲೀಸರು ಸ್ಪಷ್ಟನೆ ನೀಡಿದ್ದು ದೂರಿನಲ್ಲೂ ಹಲ್ಲೆಗೊಳಪಟ್ಟ ಯುವಕ ಇದರ ಕುರಿತು ಉಲ್ಲೇಖಿಸಿಲ್ಲ. ಇದೀಗ ಬಿಜೆಪಿ ಈ ಪ್ರಕರಣಕ್ಕೆ ಕೋಮು ಆಯಾಮ ನೀಡಲು ಹೊರಟಿರುವ ಆರೋಪ ಕೇಳಿ ಬಂದಿದೆ.

Latest Indian news

Popular Stories