ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ನಾನು ಜೈಲಿಗೆ ಹೋಗುತ್ತಿದ್ದೇನೆ ಎಂಬ ಹೆಮ್ಮೆ ಇದೆ | ಅರವಿಂದ್ ಕೇಜ್ರಿವಾಲ್

ಜಾಮೀನಿನ ಮೇರೆಗೆ ಜೈಲಿನಿಂದ ಹೊರಬಂದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಜೂನ್ 2ರಂದು ಮತ್ತೆ ಜೈಲಿಗೆ ಹೋಗಲಿದ್ದಾರೆ. ಈ ಹಿನ್ನೆಲೆ ನನ್ನ ಕುಟುಂಬವನ್ನು ನೋಡಿಕೊಳ್ಳುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಹೆತ್ತವರಿಗೆ ವಯಸ್ಸಾಗಿದೆ. ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜೈಲಿನಲ್ಲೂ ಆಕೆಯ ಬಗ್ಗೆ ನಾನು ತುಂಬಾ ಚಿಂತಿತನಾಗುತ್ತೇನೆ. ಹೀಗಾಗಿ ನನ್ನ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನ ಪತ್ನಿ ಸುನೀತಾ ತುಂಬಾ ಧೈರ್ಯವಂತೆ. ಕಷ್ಟದ ಸಮಯದಲ್ಲಿ ಆಕೆ ನನಗೆ ಬೆಂಬಲವಾಗಿ ನಿಂತಿದ್ದಾಳೆ. ಜೊತೆಗೆ ನೀವೆಲ್ಲರೂ ನನಗೆ ಬೆಂಬಲ ನೀಡಿದ್ದೀರಿ. ನನ್ನ ಪ್ರಾಣ ಹೋದರೂ ಸರಿ ಸರ್ವಾಧಿಕಾರದ ವಿರುದ್ಧ ಹೋರಾಟ ನಡೆಸುತ್ತೇನೆ. ದುಃಖ ಪಡಬೇಡಿ. ನಿಮ್ಮೆಲ್ಲರ ಆಶೀರ್ವಾದ ನನ್ನನ್ನು ಕಾಪಾಡುತ್ತದೆ. ದೇವರು ಬಯಸಿದರೆ ಈ ನಿಮ್ಮ ಮಗ ಶೀಘ್ರದಲ್ಲೇ ಹಿಂದಿರುಗುತ್ತಾನೆ ಎಂದು ಕೇಜ್ರಿವಾಲ್ ಎಂದು ಹೇಳಿದ್ದಾರೆ.

ನನಗೆ ಸುಪ್ರೀಂಕೋರ್ಟ್ ಚುನಾವಣಾ ಪ್ರಚಾರಕ್ಕಾಗಿ 21 ದಿನಗಳ ಕಾಲಾವಕಾಶ ನೀಡಿತ್ತು. ನಾಳೆಗೆ 21 ದಿನಗಳು ಪೂರ್ಣಗೊಳ್ಳುತ್ತಿವೆ. ಭಾನುವಾರ ನಾನು ಶರಣಾಗಬೇಕಾಗಿದ್ದು, ಮತ್ತೆ ತಿಹಾರ್ ಜೈಲಿಗೆ ತೆರಳುತ್ತೇನೆ. ಬಿಜೆಪಿಯವರು ನನ್ನನ್ನು ಎಷ್ಟು ದಿನ ಜೈಲಿನಲ್ಲಿ ಇಡುತ್ತಾರೋ ತಿಳಿದಿಲ್ಲ. ಆದರೆ ನನ್ನ ಉತ್ಸಾಹ ಹೆಚ್ಚಾಗಿದೆ. ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ನಾನು ಜೈಲಿಗೆ ಹೋಗುತ್ತಿದ್ದೇನೆ ಎಂಬ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.

ಜೈಲಿನಲ್ಲಿ ನನ್ನನ್ನು ಹಲವು ರೀತಿಯಲ್ಲಿ ಬಗ್ಗಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರು ಯಶಸ್ವಿಯಾಗಲಿಲ್ಲ. ನನಗೆ ಹಲವಾರು ರೀತಿಯಲ್ಲಿ ಹಿಂಸೆ ನೀಡುತ್ತಿದ್ದರು. ನಾನು 20 ವರ್ಷಗಳಿಂದ ಮಧುಮೇಹ ರೋಗಿಯಾಗಿದ್ದು, ಕಳೆದ 10 ವರ್ಷಗಳಿಂದ ನಾನು ಪ್ರತಿದಿನ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ. ಆದರೆ ಜೈಲಿನಲ್ಲಿ ಅವರು ಹಲವಾರು ದಿನಗಳವರೆಗೆ ಇನ್ಸುಲಿನ್ ನೀಡುವುದನ್ನು ನಿಲ್ಲಿಸಿದರು. ಹೀಗಾಗಿ ನನ್ನ ಶುಗರ್ ಲೆವೆಲ್ 300ಕ್ಕೆ ತಲುಪಿತು. ಈ ಜನರಿಗೆ ಏನು ಬೇಕೆಂದು ತಿಳಿದಿಲ್ಲ. ನಾನು 50 ದಿನಗಳ ಕಾಲ ಜೈಲಿನಲ್ಲಿದ್ದೆ. ಈ ೫೦ ದಿನಗಳಲ್ಲಿ ನಾನು 6 ಕೆ.ಜಿ ಕಡಿಮೆಯಾಗಿದ್ದೇನೆ. ಇನ್ನು ಜೈಲಿನಿಂದ ಹೊರಬಂದರೂ ತೂಕ ಹೆಚ್ಚಾಗುತ್ತಿಲ್ಲ. ಇದು ಕೆಲವು ಗಂಭೀರ ಕಾಯಿಲೆಯ ಲಕ್ಷಣಗಳೂ ಆಗಿರಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ ಎಂದರು.

Latest Indian news

Popular Stories