ಗುಜರಾತಿ ನನ್ನ ಮಾತೃಭಾಷೆಯಾದರೆ, ಕನ್ನಡ ಕರ್ಮಭಾಷೆ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜರಿಯಾ

ಬೆಂಗಳೂರು: ಬಾರ್ ಅಂಡ್ ಬೆಂಚ್ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಅವರು ಸೋಮವಾರ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಕನ್ನಡ-ಕರ್ನಾಟಕ ಮತ್ತು ಗುಜರಾತಿ-ಗುಜರಾತ್ ನಡುವಿನ ಬಾಂಧವ್ಯವನ್ನು ಎತ್ತಿ ತೋರಿಸಿದರು.

‘ಪಾರ್ಸಿ ಸಮುದಾಯವು ಪರ್ಷಿಯಾದಿಂದ ಗುಜರಾತ್‌ಗೆ ಬಂದು ಸಂಜನ್ ಎಂಬ ಸ್ಥಳದ ಬಳಿ ಆಶ್ರಯ ಪಡೆದಾಗ, ರಾಜನು ಪಾರ್ಸಿಗಳ ನಾಯಕನಿಗೆ ಹಾಲು ತುಂಬಿದ ಲೋಟವನ್ನು ಕಳುಹಿಸುತ್ತಾನೆ. ಈ ಮೂಲಕ ರಾಜನು ತನ್ನ ರಾಜ್ಯದಲ್ಲಿ, ಪಾರ್ಸಿಗಳ ಮುಖ್ಯಸ್ಥರನ್ನು ಒಳಗೊಂಡಂತೆ ಬೇರೆಯವರಿಗೆ ಸ್ಥಳಾವಕಾಶವಿಲ್ಲ ಎಂದು ತಿಳಿಸಲು ಬಯಸಿರುತ್ತಾನೆ. ಈ ವೇಳೆ ಪಾರ್ಸಿ ಸಮುದಾಯದ ಮುಖ್ಯಸ್ಥರು ಹಾಲಿಗೆ ಸಕ್ಕರೆ ಸೇರಿಸುವ ಮೂಲಕ ಪಾರ್ಸಿಗಳು ಜನರೊಂದಿಗೆ ಬೆರೆಯುತ್ತಾರೆ ಮತ್ತು ಹಾಲನ್ನು ಸಿಹಿಗೊಳಿಸುತ್ತಾರೆ ಎಂದು ಪ್ರತಿಕ್ರಿಯಿಸುತ್ತಾರೆ. ನನಗೂ ಕೂಡ ಇಲ್ಲಿ ಇತಿಹಾಸ ಮರುಕಳಿಸಲಿ’ ಎಂದು ನ್ಯಾಯಮೂರ್ತಿ ಅಂಜಾರಿಯಾ ಹೇಳಿದರು.

ಗುಜರಾತ್ ಮತ್ತು ಕರ್ನಾಟಕಕ್ಕೆ ಹೇಗೆ ಸಂಬಂಧವಿದೆ ಎಂಬುದನ್ನು ತಿಳಿಯುವುದು ಅದ್ಭುತವಾಗಿದೆ. ಇಲ್ಲಿನ ಚಾಲುಕ್ಯ ರಾಜವಂಶವು ಗುಜರಾತ್ ಅನ್ನು ಆಳಿತು. ಇದರಿಂದಾಗಿ ಗುಜರಾತಿ ಭಾಷೆಯಲ್ಲಿ ಕನ್ನಡದಿಂದ ಎರವಲು ಪಡೆದ ಅಥವಾ ಕನ್ನಡ ಭಾಷೆಯಿಂದ ಪ್ರಭಾವಿತವಾದ ಕೆಲವು ಪದಗಳಿವೆ ಎಂದು ಅವರು ಹೇಳಿದರು.

‘ನನಗೂ ಸಾಹಿತ್ಯ ಮತ್ತು ಕಾವ್ಯದ ಮೇಲೆ ಸ್ವಲ್ಪ ಒಲವಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡದ ಕವಿ ಕುವೆಂಪು ಮತ್ತು ಗುಜರಾತಿನ ಕವಿ ಉಮಾಶಂಕರ್ ಜೋಶಿ ಅವರಿಗೆ 1967ರಲ್ಲಿ ಜಂಟಿಯಾಗಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ ಎಂದು ತಿಳಿದು ನನಗೆ ಸಂತೋಷವಾಯಿತು. ಕುವೆಂಪು ಅವರ ಧ್ವನಿ ಸಾಮಾಜಿಕ ಸಮಾನತೆಯ ಧ್ವನಿಯಾಗಿದೆ. ಕರ್ನಾಟಕದ ಮಕ್ಕಳು ಇಂಗ್ಲಿಷ್ ಜೊತೆಗೆ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂಬುದು ಅವರ ಆಸೆಯಾಗಿದೆ ಎಂಬುದನ್ನು ನಾನು ತಿಳಿದುಕೊಂಡೆ. ನಾನು ಕೂಡ ಮಾತೃಭಾಷೆಯ ಕಟ್ಟಾ ಬೆಂಬಲಿಗ. ಗುಜರಾತಿ ನನ್ನ ಮಾತೃಭಾಷೆಯಾದರೆ, ಕನ್ನಡ ನನ್ನ ಕರ್ಮಭಾಷೆಯಾಗಲಿದೆ’ ಎಂದು ಹೇಳಿದರು.

ಕರ್ನಾಟಕವು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ ಮತ್ತು ಕರ್ನಾಟಕವು ಸಂಸ್ಕೃತ ಮತ್ತು ಸಂಸ್ಕೃತಿಯ ರಾಜ್ಯವಾಗಿದೆ. ನ್ಯಾಯಾಂಗ ಸಂಸ್ಕೃತಿಯ ಸಂದರ್ಭದಲ್ಲಿ, ಸಂಸ್ಕೃತಿ ನೈತಿಕವಾಗಿರಬೇಕು ಮತ್ತು ಸಂಸ್ಕೃತವು ಶ್ರೀಮಂತ ಸಂಪ್ರದಾಯವನ್ನು ಸಂಕೇತಿಸುತ್ತದೆ ಎಂದರು.

Latest Indian news

Popular Stories