ಅತಿಕ್ರಮಣ ತೆರವು ಸಂದರ್ಭದಲ್ಲಿ ಗುಂಡು ಹಾರಿಸಿ ಎರಡು ಮಕ್ಕಳ ತಾಯಿಯನ್ನು ಕೊಲ್ಲುವ ಅಗತ್ಯವಿತ್ತಾ?

ಅತಿಕ್ರಮಣ ತೆರವು ಸುದ್ದಿಯ ಹಿಂದೆ ಹಿಂಸೆಯ ಸುದ್ದಿಯೂ ಕೂಡ ಸದ್ದು ಮಾಡುತ್ತಿದೆ. ಹೌದು ಅಸ್ಸಾಮಿನ ಬುರಾ ಚಾಪೊರಿ ಅಭಯಾರಣ್ಯ ಪ್ರದೇಶದಲ್ಲಿ ಅತಿಕ್ರಮಣ ತೆರವುಗೊಳಿಸುವ ಸಂದರ್ಭದಲ್ಲಿ ನಡೆದ ಸಂಘರ್ಷದಲ್ಲಿ ಎರಡು ಮಕ್ಕಳ ತಾಯಿಯ ಮೇಲೆ ಗುಂಡು ಹಾರಿಸಲಾಗಿದೆ. ಆಕೆ ಗುಂಡು ತಗುಲಿ ಜೀವ ಅರ್ಪಿಸಿದ್ದಾಳೆ.‌ಬದುಕಿಗಾಗಿ ನಡೆದ ಸಂಘರ್ಷದಲ್ಲಿ ಪ್ರಭುತ್ವದ ದರ್ಪ ಗೆದ್ದಿದೆ.

ಈ ಭಾಗದಲ್ಲಿ ಬಹುತೇಕ ಮಂದಿ ಶಾಂತಿಯುತವಾಗಿ ತಮ್ಮ ಮನೆಗಳನ್ನು ತೆರವುಗೊಳಿಸಿ ಹೊರಟಿದ್ದಾರೆ.ಕೆಲವರು ನೆಲೆ ಕಾಣದೆ ಮತ್ತೆ ಆ ಪ್ರದೇಶದಲ್ಲಿ ಬದುಕು ಕಟ್ಟಲು ಹವಣಿಸಿದ್ದಾರೆ ಎಂಬ ಆರೋಪ ಪ್ರಭುತ್ವದ ಕಡೆಯದ್ದು. ಆರು ಬಿದಿರು ಒಂದು ಪ್ಲಾಸ್ಟಿಕ್ ತಾರ್ಪ್ಯಲೀನ್ ಶೀಟ್ ಈ ಸಂಘರ್ಷಕ್ಕೆ ಕಾರಣವಾಯಿತು. ಅರಣ್ಯಾಧಿಕಾರಿ ಮತ್ತು ಆ ಬಡ ಜನರ ನಡುವೆ ನಡೆದ ಸಂಘರ್ಷದಲ್ಲಿ‌ ಮಹಿಳೆ ಜೀವ ಅರ್ಪಿಸಿದ್ದಾಳೆ.

ರಹೀಮಾ ಖಾತುನ್ ಮೃತ ಮಹಿಳೆ. ಆಕೆಯೊಂದಿಗೆ ಶೆಡ್ ನಲ್ಲಿ ಆರು ಮಂದಿ ವಾಸಿಸುತ್ತಿದ್ದರು. ಈ ಸಂಘರ್ಷದಲ್ಲಿ ಮೂರು ಮಂದಿ ಸಿಬ್ಬಂದಿಗಳಿಗೂ ಗಾಯಗಳಾಗಿವೆ ಎನ್ನಲಾಗಿದೆ.

ಹಲವು ಮಂದಿ ಶಾಂತಯುತವಾಗಿ ಜಾಗ ಖಾಲಿ ಮಾಡಿದ್ದರು. ಬುಲ್ಡೋಝರ್ ಸದ್ದಿನ ಮುಂಚೆಯೇ ಅನಿವಾರ್ಯವಾಗಿ ಜಾಗ ಖಾಲಿ ಮಾಡಿ ಬದುಕು ಕಟ್ಟಿಕೊಳ್ಳಲು ಇನ್ನಿತರ ಸ್ಥಳಗಳಿಗೆ ವಲಸೆ ಹೋದ ಐದು ತಿಂಗಳ ನಂತರ ಮತ್ತೆ ಈ ಸಂಘರ್ಷ ಸುದ್ದಿಯಾಗಿದೆ.

ಫೆಬ್ರವರಿಯಲ್ಲಿ ಅತಿಕ್ರಮಣ ಬಿಟ್ಟು ತೆರಳಿದವರು‌ ಮತ್ತೆ ಬಂದು ಆ ಜಾಗದಲ್ಲಿ ವಾಸಿಸಲು ತೆರಳಿದಾಗ‌ಈ ಘಟನೆ ಸಂಭವಿಸಿದೆಯೆಂದು ಸಬೂಬು ಹೇಳಲಾಗುತ್ತದೆ. ನಾಗಾಂವ್ ವೈಲ್ಡ್ ಲೈಫ್ ವಿಭಾಗೀಯ ಅರಣ್ಯಾಧಿಕಾರಿ ಜಯಂತ್ ದೇಕಾ ತೆರವಿಗೆ ಆಗಮಿಸಿದಾಗ ಎರಡು ಕಡೆಯಿಂದ ಸಂಘರ್ಷ ಆರಂಭವಾಗಿದೆ. ಸಂಘರ್ಷದಲ್ಲಿ ಖಾತೂನ್ ಗುಂಡಿಗೆ ಬಲಿಯಾದರೆ, ಮೂವರು ಸಂಬಂಧಿಗಳು ಗಾಯಗೊಂಡಿದ್ದಾರೆ.

ಆಕೆಯ ಗಂಡ ಸಮೀರ್ ಅಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಮಕ್ಕಳಿಗೂ ಗಾಯಗಳಾಗಿವೆ. ಈ ಮುಂಚೆ ತಮ್ಮ ಮನೆ ಧ್ವಂಸಗೊಂಡ ಪ್ರದೇಶದಲ್ಲಿ ಶೆಡ್ ಹಾಕಿದ್ದೆ ಈ ಘಟನೆಗೆ ಕಾರಣ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

ಆದರೆ ಆಕೆಯ ಸಂಬಂಧಿ ಫರೀದಾ ಖಾತೂನ್ ಹೇಳುವ ಪ್ರಕಾರ,ತಾವು ವಾಸಿಸುತ್ತಿದ್ದ ದನ ಕೊಟ್ಟಿಗೆಗೆ ಮಳೆಯ ನೀರು ನುಗ್ಗಿದ ಕಾರಣ ನಾವು ಇಲ್ಲಿ ದನ, ಕರು ಮತ್ತು ಆಡುಗಳನ್ನು ತಂದು ಶೆಡ್ ಹಾಕಿ ಇದ್ದೇವು ಎಂದು ತಮ್ಮ ಸ್ಪಷ್ಟೀಕರಣ ನೀಡಿದ್ದಾರೆ.

ಆದರೆ ಅರಣ್ಯಾಧಿಕಾರಿಗಳು, ಅವರು ಈ ಜಾಗವನ್ನು ಅತಿಕ್ರಮಿಸಲು ಈ ಶೆಡ್ ಹಾಕಿದ್ದಾರೆ ಎಂದು ತಮ್ಮ ವಾದ ಮಂಡಿಸಿದ್ದಾರೆ. ಒಟ್ಟಿನಲ್ಲಿ ಬದುಕು ಕಟ್ಟಿಕೊಳ್ಳುವ ಹೋರಾಟದಲ್ಲಿ ಒಂದು ಜೀವ ಬಲಿಯಾಗಿದೆ. ಭಾರತ ವಿಶ್ವ ಗುರು ಎನಿಸಿಕೊಳ್ಳಲು ಸಿದ್ಧವಾಗುತ್ತಿರುವ ಈ ಸಂದರ್ಭದಲ್ಲಿ ಇನ್ನೂ ಕೋಟ್ಯಾಂತರ ಜನರಿಗೆ ಇರಲು ಸೂರು ಇಲ್ಲದಿರುವುದು ಕೂಡ ವಾಸ್ತವವಲ್ಲವೇ? ಇಂತಹ ಅಸಹಾಯಕ ಜನರ ಅತಿಕ್ರಮಿತ ಜಾಗ ತೆರವು ಮಾಡುವ ಸಂದರ್ಭದಲ್ಲಿ ಗುಂಡು ಹಾರಾಟ ಎಷ್ಟು ಸರಿ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ!

Latest Indian news

Popular Stories