ನಾಳೆ ದೆಹಲಿಯಲ್ಲಿ INDIA ಬಣ ನಾಯಕರ ಸಭೆ-ಶರದ್ ಪವಾರ್

ಮುಂಬೈ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ನಿರೀಕ್ಷಿತ ಸ್ಥಾನಗಳಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಗಿದ್ದು, ಸರ್ಕಾರ ರಚನೆಯಲ್ಲಿ ಜೆಡಿಯು ನಾಯಕ ನಿತೀಶ್ ಕುಮಾರ್ ಹಾಗೂ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಅವರ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೆಳೆಯಲು ಬಿಜೆಪಿ ಹಾಗೂ ವಿಪಕ್ಷಗಳ ಮೈತ್ರಿಕೂಟದ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, ಮುಂದಿನ ಕಾರ್ಯತಂತ್ರ ಕುರಿತು ಚರ್ಚಿಸಲು ನಾಳೆ ದೆಹಲಿಯಲ್ಲಿ iNDIA ಬಣ ನಾಯಕರ ಸಭೆ ನಡೆಯಲಿದೆ ಎಂದು ತಿಳಿಸಿದರು. ಅಲ್ಲದೇ, ವಿಪಕ್ಷಗಳ ಕೂಟ ಸರ್ಕಾರ ರಚಿಸುವ ಸಾಧ್ಯತೆಯಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವಂತೆ ನಾನು ಜೆಡಿಯು ನಾಯಕ ನಿತೀಶ್ ಕುಮಾರ್ ಅಥವಾ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರೊಂದಿಗೆ ಮಾತನಾಡಿಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಸೀತಾರಾಂ ಯೆಚೂರಿ ಅವರೊಂದಿಗೆ ಮಾತನಾಡಿದ್ದೇನೆ. ನಾಳೆ ದೆಹಲಿಯಲ್ಲಿಇಂಡಿಯಾ ಮೈತ್ರಿಕೂಟ ಸಭೆ ನಡೆಯುವ ಸಾಧ್ಯತೆಯಿದೆ. ಇಂದು ಸಂಜೆಯೊಳಗೆ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಅದರಂತೆ ದೆಹಲಿಗೆ ತೆರಳುತ್ತೇನೆ ಎಂದು ಅವರು ಹೇಳಿದರು.

ಮುಂದಿನ ಪ್ರಧಾನಿ ಯಾರಾಗಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ ಪವಾರ್, ನಾವು ಈ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ. ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಬಹುದೇ ಎಂಬ ಬಗ್ಗೆ ಖಚಿತತೆ ಇಲ್ಲ. ನಾವು ನಾಳೆ ಸಭೆ ಸೇರಿ ಮುಂದಿನ ಕ್ರಮದ ಬಗ್ಗೆ ಸರ್ವಾನುಮತದ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

Latest Indian news

Popular Stories