ಗಾಂಧಿನಗರ: ತಮ್ಮ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ನಮ್ಮ ಸರ್ಕಾರವು ದೇಶದ ತ್ವರಿತ ಪ್ರಗತಿಗೆ ಅಗತ್ಯವಿರುವ ಪ್ರತಿಯೊಂದು ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಇಂದು ಗಾಂಧಿನಗರದಲ್ಲಿ ನಡೆದ ಗ್ಲೋಬಲ್ ರಿನ್ಯೂವಬಲ್ ಎನರ್ಜಿ ಇನ್ವೆಸ್ಟರ್ಸ್ ಮೀಟ್ ಮತ್ತು ಎಕ್ಸ್‌ಪೋ (ರೀ-ಇನ್ವೆಸ್ಟ್ 2024) 4ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 21ನೇ ಶತಮಾನಕ್ಕೆ ಭಾರತವೇ ಅತ್ಯುತ್ತಮ ಎಂದು ಭಾರತೀಯರಷ್ಟೇ ಅಲ್ಲ ಇಡೀ ವಿಶ್ವವೇ ಭಾವಿಸುತ್ತದೆ ಎಂದರು.
“ಮೊದಲ 100 ದಿನಗಳಲ್ಲಿ(ಕೇಂದ್ರ ಸರ್ಕಾರದ ಮೂರನೇ ಅವಧಿಯ) ನಮ್ಮ ಆದ್ಯತೆಗಳು, ವೇಗ ಮತ್ತು ಪ್ರಮಾಣವನ್ನು ನೀವು ವೀಕ್ಷಿಸಬಹುದು. ನಾವು ದೇಶದ ಕ್ಷಿಪ್ರ ಪ್ರಗತಿಗೆ ಅಗತ್ಯವಿರುವ ಪ್ರತಿಯೊಂದು ವಲಯ ಮತ್ತು ಅಂಶವನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ” ಎಂದು ಪ್ರಧಾನಿ ಹೇಳಿದರು.
“ಭಾರತದ ವೈವಿಧ್ಯತೆ, ಪ್ರಮಾಣ, ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಅನನ್ಯವಾಗಿದೆ. ಭಾರತವು ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿಯನ್ನು ಸಿದ್ಧಪಡಿಸುತ್ತಿದೆ ಮತ್ತು ಕೇವಲ ಉನ್ನತ ಸ್ಥಾನವನ್ನು ತಲುಪುವುದು ಮಾತ್ರವಲ್ಲದೆ ಶ್ರೇಯಾಂಕವನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಮೋದಿ ಪ್ರತಿಪಾದಿಸಿದರು.
“ನಮಗೆ ಹಸಿರು ಭವಿಷ್ಯ ಮತ್ತು ನಿವ್ವಳ ಶೂನ್ಯವು ಕೇವಲ ಅಲಂಕಾರಿಕ ಪದಗಳಲ್ಲ. ಇವು ದೇಶದ ಅವಶ್ಯಕತೆಗಳು ಮತ್ತು ಅದನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಅಯೋಧ್ಯೆ ಮತ್ತು ಇತರ 16 ನಗರಗಳನ್ನು ಮಾದರಿ ಸೌರ ನಗರಗಳಾಗಿ ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ.
140 ಕೋಟಿ ಭಾರತೀಯರು ದೇಶವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ” ಎಂದರು.