ಉಗಾಂಡ ಮಗು ದತ್ತು ಪಡೆದ ಭಾರತೀಯ ದಂಪತಿ: ಮಾನ್ಯತೆಗೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ಉಗಾಂಡ ದೇಶವು ಹೇಗ್‌ ದತ್ತು ಒಪ್ಪಂದಕ್ಕೆ ಸಹಿ ಹಾಕದ ಹೊರತಾಗಿಯೂ ಭಾರತೀಯ ದಂಪತಿ ಉಗಾಂಡದ ಮಗುವನ್ನು ದತ್ತು ಪಡೆದಿರುವುದನ್ನು ಮಾನ್ಯಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಸಂಬಂಧ ದಂಪತಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, “ಉಗಾಂಡದ ಮಗುವನ್ನು ದತ್ತು ಪಡೆಯುವುದಕ್ಕೆ ದಂಪತಿ ಸಲ್ಲಿಸಿರುವ ಮನವಿ ಪರಿಗಣಿಸಿ” ಎಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.

ಹೇಗ್‌ ದತ್ತು ಒಪ್ಪಂದಕ್ಕೆ ಉಗಾಂಡ ಸಹಿ ಹಾಕದಿರುವುದು ಭಾರತೀಯ ದಂಪತಿಯ ಮಗುವಿನ ಹಕ್ಕು ಕಸಿಯಲು ಕಾರಣವಾಗಬಾರದು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

ಹಿಂದೂ ದತ್ತು ಮತ್ತು ನಿರ್ವಹಣಾ ಕಾಯಿದೆ ಅಡಿ ದತ್ತು ಪ್ರಕ್ರಿಯೆ ನಡೆಯದೇ ಇದ್ದರೂ ಹಾಗೂ ಹೇಗ್‌ ಒಪ್ಪಂದಕ್ಕೆ ಸಹಿ ಹಾಕದೇ ಇದ್ದರೂ ದತ್ತು ತೆಗೆದುಕೊಳ್ಳಲಾಗಿದೆ. ಹೀಗಾಗಿ, ದತ್ತು ತೆಗೆದುಕೊಂಡಿರುವ ಭಾರತೀಯ ದಂಪತಿಯ ಮಗುವಿನ ಹಕ್ಕುಗಳನ್ನು ಅತಂತ್ರಗೊಳಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

ಉಗಾಂಡದಲ್ಲಿದ್ದಾಗ ಭಾರತೀಯ ದಂಪತಿ ಮಗುವನ್ನು ದತ್ತು ಪಡೆದಿದ್ದರು. ಈ ಸಂಬಂಧ ಉಗಾಂಡದ ನ್ಯಾಯಾಲಯವು ಮಗುವನ್ನು ಭಾರತೀಯ ದಂಪತಿ ದತ್ತು ಪಡೆದಿದ್ದು, ಮಗುವಿನ ಮೇಲಿನ ಹಕ್ಕನ್ನು ಖಾತರಿಪಡಿಸಿತ್ತು. ಇದನ್ನು ಔಪಚಾರಿಕಗೊಳಿಸುವ ನಿಟ್ಟಿನಲ್ಲಿ ಭಾರತೀಯ ದಂಪತಿಯು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ (ಸಿಎಆರ್‌ಎ) ಮನವಿ ಸಲ್ಲಿಸಿತ್ತು. ಇದಕ್ಕೆ ಸಿಎಆರ್‌ಎಯಿಂದ ಸ್ಪಂದನೆ ದೊರೆಯಿದ್ದಾಗ ದಂಪತಿಯು ಹೈಕೋರ್ಟ್‌ ಮೇಟ್ಟಿಲೇರಿದ್ದರು. ಈಗ ಹೈಕೋರ್ಟ್‌ ಅರ್ಜಿಯನ್ನು ಪುರಸ್ಕರಿಸಿದೆ.

Latest Indian news

Popular Stories