ಇದು ವಿನಾಶಕಾರಿ ಬಜೆಟ್: ನಿರ್ಮಲಾ ಸೀತಾರಾಮನ್ ಬಜೆಟ್ ಗೆ ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಈ ಬಜೆಟ್ ಅಂತಾರೆ. ಆದರೆ ಇದು ವಿನಾಶಕಾರಿ ಬಜೆಟ್ ಅಂತ ನಾನು ಹೇಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ನಿರ್ಮಾಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಗ್ಗೆ ಕಿಡಿ ಕಾರಿದ್ದಾರೆ.

ಇಂದು ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಒಟ್ಟಾರೆ ಕೇಂದ್ರದ ಬಜೆಟ್ ನಿರಾಶದಾಯಕ ಬಜೆಟ್. ಇದು ಎಲೆಕ್ಷನ್ ಬಜೆಟ್ ಎಂದು ಹೇಳಿದ್ದಾರೆ.

16 ಲಕ್ಷದ 85 ಸಾವಿರದ 496 ಕೋಟಿ ರೂ. ಸಾಲ ಮಾಡಿದ್ದಾರೆ. 190 ಲಕ್ಷ ಕೋಟಿ‌ ರೂ. ಸಾಲ‌ ಕೇಂದ್ರದ ಮೇಲಿದೆ. ಈ ಬಜೆಟ್​ನಲ್ಲಿ‌ ಸಾಲಕ್ಕಾಗಿ 11 ಲಕ್ಷದ 91 ಸಾವಿರ ಕೋಟಿ ರೂ. ಬಡ್ಡಿ ಪಾವತಿ ಮಾಡಬೇಕಿದೆ. ಒಟ್ಟಾರೆಯಾಗಿ ಈ ಬಜೆಟ್ ನಿರಾಶಾದಾಯಕವಾಗಿದ್ದು, ಚುನಾವಣೆಗೋಸ್ಕರ ಮಾಡಿದ್ದಾರೆ. ಈ ಬಜೆಟ್ ವಿಶ್ಲೇಷಣೆ ಮಾಡುವುದು ಕಷ್ಟ ಎಂದರು.

ಈ ಬಜೆಟ್ ಜನರ ಮುಂದೆ ಇಡುವುದಕ್ಕಿಂತ, ಮುಚ್ಚಿಟ್ಟಿರುವುದೇ ಜಾಸ್ತಿ. ನಿರುದ್ಯೋಗ, ಬೆಲೆ‌ ಏ‌ರಿಕೆ, ರೈತರ ಸಮಸ್ಯೆ, ಬರಗಾಲದ ಬಗ್ಗೆ ಹೇಳಿಲ್ಲ. ಸಾಲ ಎಷ್ಟು ಮಾಡಿದ್ದೇವೆ, ವಿಕಸಿತ ಭಾರತ‌ ಅಂತ ಎಲ್ಲ ಕಡೆ ಮೋದಿ ಸರ್ಕಾರದ ಸಾಧನೆ ಅಂತ ಪ್ರಚಾರ ಮಾಡುತ್ತಿದ್ದಾರೆ. ಇದು ವಿಕಸಿತ ಬಜೆಟ್ ಅಂತ ಹೇಳುತ್ತಿದ್ದಾರೆ. ವಿಕಸಿತ ಅಲ್ಲ, ಇದು ವಿನಾಶಕಾರಿ ಭಾರತ ಮಾಡುವ ಬಜೆಟ್​ ಎಂದು ಕಿಡಿಕಾರಿದ್ದಾರೆ.

ಇದು ಬಡವ ಪರ ಬಜೆಟ್ ಅಲ್ಲ. ನಾವು ನಿಜವಾಗಿಯೂ ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗಾಗಿ ಕಾರ್ಯಕ್ರಮ ಕೊಟ್ಟಿದ್ದೇವೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ, ಗೃಹಜ್ಯೋತಿ, ಕೃಷಿಭಾಗ್ಯ ಭಾಗ್ಯಗಳನ್ನ ಕೊಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Latest Indian news

Popular Stories