ಜಮ್ಮು-ಕಾಶ್ಮೀರ: ಕೊನೆಯ ಹಂತದ ಮತದಾನ ಪ್ರಕ್ರಿಯೆ ಆರಂಭ, 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಏಳು ಜಿಲ್ಲೆಗಳ ವಿಧಾನಸಭೆ ಕ್ಷೇತ್ರಗಳಿಗೆ 3ನೇ ಮತ್ತು ಅಂತಿಮ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, 415 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಂಗಳವಾರ ನಿರ್ಧಾರವಾಗಲಿದೆ.

ಕಾಶ್ಮೀರ ವಿಭಾಗದ ಕುಪ್ವಾರಾ, ಬಾರಾಮುಲ್ಲಾ ಮತ್ತು ಬಂಡಿಪೋರಾ, ಜಮ್ಮು ವಿಭಾಗದಲ್ಲಿ ಜಮ್ಮು, ಉಧಂಪುರ, ಕಥುವಾ ಮತ್ತು ಸಾಂಬಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಉತ್ತರ ಕಾಶ್ಮೀರದ ಬಾರಾಮುಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರೆ, ಜಮ್ಮು ಜಿಲ್ಲೆಯ ಅಖ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ಅಖಾಡದಲ್ಲಿ ಮೂವರು ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

ಕಾಶ್ಮೀರ ವಿಭಾಗದಲ್ಲಿ, ಕರ್ನಾಹ್, ಟ್ರೆಹ್ಗಾಮ್, ಕುಪ್ವಾರಾ, ಲೋಲಾಬ್, ಹಂದ್ವಾರಾ, ಲಂಗೇಟ್, ಸೋಪೋರ್, ರಫಿಯಾಬಾದ್, ಉರಿ, ಬಾರಾಮುಲ್ಲಾ, ಗುಲ್ಮಾರ್ಗ್, ವಾಗೂರಾ-ಕ್ರೀರಿ, ಪಟ್ಟಾನ್, ಸೋನಾವರಿ, ಬಂಡಿಪೋರಾ ಮತ್ತು ಗುರೇಜ್ (ಎಸ್‌ಟಿ) ಒಳಗೊಂಡ 16 ವಿಧಾನಸಭಾ ಕ್ಷೇತ್ರಗಳಿವೆ.

ಜಮ್ಮು ವಿಭಾಗದ 24 ವಿಧಾನಸಭಾ ಕ್ಷೇತ್ರಗಳಲ್ಲಿ ಉಧಮ್‌ಪುರ ಪಶ್ಚಿಮ, ಉಧಮ್‌ಪುರ ಪೂರ್ವ, ಚೆನಾನಿ, ರಾಮನಗರ (SC), ಬನಿ, ಬಿಲ್ಲವರ್, ಬಸೋಹ್ಲಿ, ಜಸ್ರೋಟಾ, ಕಥುವಾ (SC), ಹೀರಾನಗರ, ರಾಮಗಢ (SC), ಸಾಂಬಾ, ವಿಜಯಪುರ, ಬಿಷ್ನಾಹ್ (SC), ಸುಚೇತ್‌ಗಢ (SC) ಒಳಗೊಂಡಿದೆ. ಜಮ್ಮು ದಕ್ಷಿಣದಲ್ಲಿ ಜಮ್ಮು ಪೂರ್ವ, ನಗ್ರೋಟಾ, ಜಮ್ಮು ಪಶ್ಚಿಮ, ಜಮ್ಮು ಉತ್ತರ, ಮರ್ಹ್ (ಎಸ್‌ಸಿ), ಅಖ್ನೂರ್ (ಎಸ್‌ಸಿ) ಮತ್ತು ಛಾಂಬ್ ಈ ಹಂತದಲ್ಲಿ ಮತದಾನ ನಡೆಯುತ್ತಿದೆ.

3ನೇ ಹಂತದಲ್ಲಿ 39,18,220 ಮತದಾರರು ಮತದಾನ ಮಾಡಲು ಅರ್ಹತೆ ಪಡೆದುಕೊಂಡಿದ್ದು, ಮಂಗಳವಾರ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 20,09,033 ಪುರುಷ ಮತದಾರರು, 19,09,130 ​​ಮಹಿಳಾ ಮತದಾರರು ಮತ್ತು 57 ತೃತೀಯಲಿಂಗಿ ಮತದಾರಿದ್ದಾರೆ.

18 ರಿಂದ 19 ವರ್ಷ ವಯಸ್ಸಿನ 1.94 ಲಕ್ಷ ಯುವ ಮತದಾರರು 3 ನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಈ ಹಂತದಲ್ಲಿ 35,860 ವಿಕಲಚೇತನರು (PwDs) ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ 32,953 ಮತದಾರರು ಭಾಗವಹಿಸಲಿದ್ದಾರೆ.

ಪ್ರಧಾನಿ ಮೋದಿ ಮನವಿ

ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಅವರು, ಮೂರನೇ ಮತ್ತು ಕೊನೆಯ ಸುತ್ತಿನ ಮತದಾನ ಇದಾಗಿದೆ. ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಲು ಎಲ್ಲಾ ಮತದಾರರು ಮುಂದೆ ಬಂದು ಮತದಾನ ಮಾಡಬೇಕೆಂದು ವಿನಂತಿಸಿದ್ದಾರೆ.

ಪ್ರಥಮ ಬಾರಿಗೆ ಮತದಾನ ಮಾಡಲಿರುವ ಯುವ ಸ್ನೇಹಿತರಲ್ಲದೆ, ಮಹಿಳಾ ಶಕ್ತಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

Latest Indian news

Popular Stories