ನಿತಿನ್​ ಗಡ್ಕರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಜಯೇಶ್ ಪೂಜಾರಿಯಿಂದ ಕೋರ್ಟ್​ನಲ್ಲೇ ಪಾಕ್​ಪರ ಘೋಷಣೆ

ಬೆಳಗಾವಿ, ಜೂನ್​​ 12: ಕೇಂದ್ರ ಸಚಿವ ನಿತಿನ್​ ಗಡ್ಕರಿ (Nitin Gadkari) ಮತ್ತು ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ (Alok Kumar) ಅವರಿಗೆ ಜೀವ ಬೆದರಿಕೆ ಹಾಕಿದ್ದ ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ತಾನ (Pakistan) ಜಿಂದಾಬಾದ್ ಘೋಷಣೆ ಕೂಗಿದ್ದಾನೆ. ಪಾತಕಿ ಜಯೇಶ್ ಪೂಜಾರಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗುತ್ತಿದ್ದಂತೆ ವಕೀಲರು ಮತ್ತು ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿದರು. ಧರ್ಮದೇಟು ಬೀಳುತ್ತಿದ್ದಂತೆ ಪಾತಕಿ ಜಯೇಶ್ ಪೂಜಾರಿಯನ್ನು ರಕ್ಷಣೆ ಮಾಡಿ ಪೊಲೀಸರು ಎಪಿಎಂಸಿ ಠಾಣೆಗೆ ಕರೆದುಕೊಂಡು ಹೋದರು.

ಆರೋಪಿ ಜಯೇಶ್ ಪೂಜಾರಿ ಈ ಹಿಂದೆ ರಾಜ್ಯ ಸಂಚಾರ ಹಾಗೂ ರಸ್ತೆ ಸುರಕ್ಷತೆ ಎಡಿಜಿಪಿ ಅಧಿಕಾರಿ ಅಲೋಕ್ ಕುಮಾರ್​ಗೆ ಜೀವ ಬೆದರಿಕೆ ಹಾಗಿದ್ದನು. ಹಿಂಡಲಗಾ ಜೈಲಿನಲ್ಲಿದ್ದುಕೊಂಡು ಜೀವ ಬೆದರಿಕೆ ಹಾಕಿದ್ದನು.

ಐಪಿಎಸ್​ ಅಧಿಕಾರಿ ಅಲೋಕ್​ ಕುಮಾರ್​ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ಜಯೇಶ್ ಪೂಜಾರಿಯನ್ನು ಪೊಲೀಸರು ಇಂದು (ಜೂ.12) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯದಲ್ಲಿ ತನ್ನ ಅಹವಾಲು ಸ್ವೀಕರಿಸುತ್ತಿಲ್ಲ ಅಂತ ಆರೋಪಿ ಜಯೇಶ್​ ಪೂಜಾರಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎಂದು ತಿದುಬಂದಿದೆ.

ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ್ ಕಳೆದ ವರ್ಷ ಜನವರಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಿದ್ದನು. ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕಚೇರಿಗೆ ಬೆದರಿಕೆ ಕರೆ ಮಾಡಿದ್ದನು. 10 ಕೋಟಿ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದನು. ಪ್ರಕರಣವನ್ನು ದಾಖಲಿಸಿಕೊಂಡು ಮಹಾರಾಷ್ಟ್ರ ಪೊಲೀಸರು ಕರಣದ ತನಿಖೆ ನಡೆಸಿದ್ದರು.

ತನಿಖೆ ವೇಳೆ ಮಂಗಳೂರಿನ ಡಬಲ್ ಮರ್ಡರ್ ಆರೋಪಿ ಹಾಗೂ ವಿವಿಧ ಪ್ರಕರಣಗಳ ಪ್ರಮುಖ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ್​​ ಜನವರಿ 14 ಮತ್ತು ಮಾರ್ಚ್ 21 ರಂದು ಹಿಂಡಲಗಾ ಜೈಲಿನಿಂದ ಸೆಲ್ ಫೋನ್ ಬಳಸಿ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದನು ಎಂದು ಪತ್ತೆಯಾಗಿತ್ತು. ಅಲ್ಲದೆ ಈತನಿಗೆ ಭಯೋತ್ಪಾದಕ ಅಫ್ಸರ್ ಪಾಷಾ ನಂಟಿರುವುದು ಪತ್ತೆಯಾಗಿತ್ತು.

Latest Indian news

Popular Stories