ನ್ಯಾಯಾಂಗ ತನಿಖೆ ಆರಂಭವಾಗಿದೆ ಎಂದರೆ ಸೈಟ್ ವಾಪಸ್ ಕೊಟ್ಟಂತೆ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಬಿಜೆಪಿಯವರು ಪ್ರಜಾಪ್ರಭುತ್ವ ಕೊಲೆ ಮಾಡ್ತಿದ್ದಾರೆ. ಮುಡಾ ಸೈಟು ವಿಚಾರದಲ್ಲಿ ತಂದೆ, ತಾಯಿ ಇಬ್ಬರಿಗೂ ಬೇಸರ ಆಗಿದೆ. ಹಾಗೆಂದು ಹೆದರಿ ಕೂರುವುದಿಲ್ಲ, ಬಿಜೆಪಿ ಕುತಂತ್ರದ ವಿರುದ್ಧ ಹೋರಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಜನಾಂದೋಲನ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿರುವ ಅವರು, ರಾಜ್ಯಪಾಲರು ಅಸಾಂವಿಧಾನಿಕವಾಗಿ ನೋಟಿಸ್‌ ಕೊಟ್ಟ ಕಾರಣ ತಂದೆಯವರಿಗೆ ಬೇಸರವಾಗಿದೆ. ಅಲ್ಲದೇ ನಮಗೆ ನ್ಯಾಯವಾಗಿ ಬರಬೇಕಾದ ಪರಿಹಾರಕ್ಕೆ ಯಾಕೆ ಹೀಗೆ ಮಾಡ್ತಿದ್ದಾರೆ? ಎಂದು ನನ್ನ ತಾಯಿಗೂ ಬೇಜಾರಾಗಿದೆ. ನಾವು ಕೋರ್ಟ್‌ನಲ್ಲಿ ಹೋರಾಡಿ ಧಕ್ಕಿಸಿಕೊಳ್ಳೋಣ ಎಂದು ತಂದೆಯವರು ಹೇಳಿದ್ದಾರೆ. ಈಗಾಗಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ. ಅಂದರೆ ಅದರ ಅರ್ಥ ಈಗ ಸೈಟ್ ಗಳು ನಮ್ಮ ಬಳಿಯಿಲ್ಲ, ನ್ಯಾಯಾಂಗ ತನಿಖೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸೈಟ್ ನಮ್ಮ ಮಾಲೀಕತ್ವದಲ್ಲಿ ಇರುವುದಿಲ್ಲ ಅದರಲ್ಲಿ ಕ್ಲೀನ್ ಚಿಟ್ ಬಂದರೆ ಮಾತ್ರ ನಮ್ಮದಾಗುತ್ತದೆ. ಅಕ್ರಮವಾಗಿದ್ದರೆ ಸೈಟ್ ಗಳನ್ನು ವಾಪಸ್ ತೆಗೆದುಕೊಳ್ಳಿ ಎಂದು ಸವಾಲು ಹಾಕಿದ್ದಾರೆ.

ಇದೇ ವೇಳೆ, ನಿಮ್ಮ ಕುಟುಂಬದ ಒಟ್ಟು ಆಸ್ತಿ ಎಷ್ಟಿದೆ? ಎಂಬ ಪ್ರಶ್ನೆಗೆ ಉತ್ತರಿಸಿದ ಯತೀಂದ್ರ, ಒಟ್ಟು ಆಸ್ತಿ ವಿವರ ಬೇಕಿದ್ದರೆ, ಚುನಾವಣಾ ವೇಳೆ ಆಯೋಗಕ್ಕೆ ವರದಿ ಕೊಟ್ಟಿದ್ದೇವೆ ಅಲ್ಲಿ ತೆಗೆದುಕೊಳ್ಳಿ. ಅದರಲ್ಲಿ ಸಂಪೂರ್ಣ ಆಸ್ತಿ ವಿವರ ಇದೆ. ಈಗ ಕೇಳಿದ್ರೆ ಒಂದು ಹೇಳಬಹುದು, ಒಂದು ಬಿಡಬಹುದು ಹಾಗಾಗಿ ಅಲ್ಲಿಂದ ಮಾಹಿತಿ ಪಡೆದುಕೊಳ್ಳಿ ಎಂದು ಉತ್ತರಿಸಿದರು. ಬಿಜೆಪಿಯವರು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಜನಾದೇಶ ಪಡೆದು ಆಯ್ಕೆಯಾದ ಸರ್ಕಾರಗಳನ್ನ ಕೆಡವಲು ವಾಮಮಾರ್ಗಗಳನ್ನ ಅನುಸರಿಸುತ್ತಿದ್ದಾರೆ. ರಾಜ್ಯಪಾಲರನ್ನ ಬಳಸಿಕೊಳ್ಳೋದು, ಕೇಂದ್ರದ ತನಿಖಾ ಸಂಸ್ಥೆಗಳನ್ನ ಛೂ ಬಿಡುವ ಕೆಲಸವಾಗುತ್ತಿದೆ. ಅವರು ರಾಜಕೀಯ ವಿರೋಧಿಗಳನ್ನ ಹಣಿಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಈ ಎಲ್ಲ ಕುತಂತ್ರಗಳನ್ನ ಜನರ ಮುಂದಿಡಲು ಜನಾಂದೋಲನ ಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ನನ್ನ ತಂದೆಯ 40 ವರ್ಷದ ರಾಜಕೀಯ ಜೀವನದಲ್ಲಿ ಎಂದಿಗೂ ಈ ರೀತಿ ಕಳಂಕ ಬಂದಿರಲಿಲ್ಲ. ವಿನಾಃಕಾರಣ ಅವರ ಹೆಸರು ಕೆಡಿಸಲು ಸುಳ್ಳು ಸೃಷ್ಟಿಸಿದ್ದಾರೆ. ಭ್ರಷ್ಟಾಚಾರ ಆರೋಪ ಮಾಡ್ತಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯುತ್ತಿದೆ ಎಂದರು.

Latest Indian news

Popular Stories