ಕಾರವಾರ: ಕಾರವಾರದ ಕಾಳಿ ನದಿಗೆ ಕಟ್ಟಿರುವ ಹಳೆಯ ಸೇತುವೆ ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಕುಸಿದಿದೆ. ಅದೇ ವೇಳೆ ಸೇತುವೆಯ ಮೇಲೆ ಒಂದು ಲಾರಿ ಕಾರವಾರ ದಿಂದ ಗೋವಾ ಕಡೆಗೆ ತೆರಳುತ್ತಿತ್ತು.
ಸೇತುವೆ ಕುಸಿದ ತಕ್ಷಣ ಲಾರಿ ಚಾಲಕ ಮುರುಗನ್ ಲಾರಿಯ ಕ್ಯಾಬಿನ್ ಹತ್ತಿ ಕೂಗಿಕೊಂಡಿದ್ದಾನೆ. ದಂಡೆಯಲ್ಲಿದ್ದವರು ಈ ಘಟನೆ ನೋಡಿ ಕರಾವಳಿ ಕಾವಲು ಪಡೆಗೆ ಸುದ್ದಿ ತಲುಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ನದಿಗೆ ಇಳಿದ ಕರಾವಳಿ ಕಾವಲು ಪಡೆ, ಆಗ್ನಿ ಶಾಮಕದಳ , ಮೀನುಗಾರಿಕಾ ದೋಣಿಯಲ್ಲಿದ್ದವರು , ಚಾಲಕ ಮುರುಗನ್ ರನ್ನು ಆಸ್ಪತ್ರೆಗೆ ದಾಖಲಿಸಿದರು.
ಮಧ್ಯರಾತ್ರಿ ಕಳೆದ ನಂತರ ಈ ದುರ್ಘಟನೆ ನಡೆದ ಕಾರಣ ಹೆಚ್ಚಿನ ಹಾನಿ ಸಂಭವಿಸಿಲ್ಲ. ಕಾಳಿ ನದಿಗೆ ಕಟ್ಟಿದ ಹಳೆಯ ಸೇತುವೆ ಇದಾಗಿದ್ದು, ವಾಹನ ಸಂಚಾರ ಚಾಲ್ತಿಯಲ್ಲಿತ್ತು.
ಘಟನೆ ನಂತರ ಕಾರವಾರ ,ಸದಾಶಿವಗಡ, ಗೋವಾ ಮಧ್ಯೆ ಸಂಚಾರಕ್ಕೆ ನಿರ್ಬಂಧ ಹಾಕಲಾಗಿದೆ.
ಸ್ಥಳಕ್ಕೆ ಶಾಸಕ ಸೈಲ್, ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ , ಎಸ್ಪಿ ಭೇಟಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುವ ಕಾಳಿ ನದಿಗೆ ಈ ಸೇತುವೆಯನ್ನು ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದ ಕಾಲದಲ್ಲಿ ನಿರ್ಮಿಸಲಾಗಿತ್ತು. ನಾಲ್ಕು ದಶಕಗಳ ಹಿಂದೆ ಕಾಳಿ ನದಿಗೆ ನಿರ್ಮಿಸಿದ ಸೇತುವೆ ಇದಾಗಿತ್ತು. ಇದರ ಪಕ್ಕದಲ್ಲಿ ಹೊಸ ಸೇತುವೆ ಸಹ ಈಚಿಗೆ ಮೂರು ವರ್ಷಗಳ ಹಿಂದೆ ನಿರ್ಮಿಸಿ ಬಳಸಲಾಗುತ್ತಿದೆ.