ಮಂಗಳೂರು: ನಮ್ಮ ಸರ್ಕಾರ ರಾಜ್ಯದ ಎಲ್ಲಾ ವರ್ಗದ ಜನರಿಗೆ ಐದು ಗ್ಯಾರಂಟಿ ಯೋಜನೆ ನೀಡುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ. ರಾಜ್ಯದ ಆರ್ಥಿಕತೆ ಸದೃಢವಾಗಿದ್ದು, ಗ್ಯಾರಂಟಿ ಯೋಜನೆಗಳು ನಿರಾತಂಕವಾಗಿ ಮುಂದುವರಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,
ಚುನಾವಣೆ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಪ್ರಧಾನಿ ಅವರು ಏನು ಬೇಕಾದ್ರೂ ಹೇಳಲಿ. ಅವರ ಆರೋಪದಲ್ಲಿ ಯಾವುದೇ ಉರುಳಿಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ಜನರ ಹೊಟ್ಟೆ ತುಂಬಿಸಿ, ಬದುಕು ಕಟ್ಟುತ್ತಿವೆ. ಆಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗಿವೆ. ಆರ್ಥಿಕವಾಗಿ ಸಬಲವಾಗಿರುವವರು ದೊಡ್ಡ ಕಂಪನಿಯ ಉದ್ಯೋಗಸ್ಥ ಮಹಿಳೆಯರು ನಮಗೆ ಸಾರಿಗೆ ಭತ್ಯೆ ಸಿಗುತ್ತಿದೆ. ನಮಗೆ ಶಕ್ತಿ ಯೋಜನೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಮಂತ್ರಿಗಳ ಜತೆ ಚರ್ಚೆ ಮಾಡುತ್ತೇವೆ ಎಂದು ನಾನು ಹೇಳಿದ್ದೆ. ನಮ್ಮ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಈ ಯೋಜನೆಯನ್ನು ನಾವು ಮಂಗಳೂರಿನಲ್ಲೇ ಘೋಷಣೆ ಮಾಡಿದ್ದು, ಇದನ್ನು ನಿಲ್ಲಿಸುವುದಿಲ್ಲ. ಮುಂದಿನ ಅವಧಿಯ ಐದು ವರ್ಷವೂ ಈ ಯೋಜನೆ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ, ಉಳುವವನಿಗೆ ಭೂಮಿ, ಬಡವರಿಗೆ ನಿವೇಶನ, ಮನೆ ನೀಡುವ ಕಾರ್ಯಕ್ರಮ ಜಾರಿ ಮಾಡಿದ್ದು, ಇಂದಿಗೂ ಈ ಯೋಜನೆಗಳು ಜಾರಿಯಲ್ಲಿವೆ. ಯಾವುದನ್ನೂ ನಾವು ಹಿಂಪಡೆದಿಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ನಮ್ಮ ಕಾರ್ಯಕ್ರಮ ನಿಲ್ಲಿಸಲು ಆಗಿಲ್ಲ. ನಮ್ಮ ಕಾರ್ಯಕ್ರಮಗಳು ಬದುಕು ಕಟ್ಟುವ ಕಾರ್ಯಕ್ರಮ. ಬಿಜೆಪಿಯವರು ಕೇವಲ ಭಾವನೆ ಮೇಲೆ ರಾಜಕೀಯ ಮಾಡುತ್ತಾರೆ” ಎಂದು ತಿಳಿಸಿದರು.
ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಬಗ್ಗೆ ಕೇಳಿದಾಗ, “ಬಿಜೆಪಿಯವರು ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ. ಮಧ್ಯಪ್ರದೇಶ, ಹರಿಯಾಣದಲ್ಲೂ ಘೋಷಣೆ ಮಾಡಿದ್ದಾರೆ. ಈಗ ಮಹಾರಾಷ್ಟ್ರದಲ್ಲಿ ಘೋಷಣೆ ಮಾಡುತ್ತಿದ್ದಾರೆ. ನಮ್ಮ ಯೋಜನೆ ನಕಲು ಮಾಡುತ್ತಿರುವುದಕ್ಕೆ ಅವರಿಗೆ ಮುಜುಗರವಾಗುತ್ತಿದೆ. ಹೀಗಾಗಿ ಟೀಕೆ ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.