ಕಾಸರಗೋಡು, ಫೆ.19: ಕೇರಳ ಮೀನುಗಾರಿಕಾ ಇಲಾಖೆಯು ತ್ರಿಕರಿಪುರ, ಶಿರಿಯಾ ಮತ್ತು ಬೇಕಲ ಕರಾವಳಿ ಪೊಲೀಸರ ಸಹಯೋಗದೊಂದಿಗೆ ರಾತ್ರಿ ವೇಳೆ ಅನಧಿಕೃತ ಟ್ರಾಲಿಂಗ್ ಚಟುವಟಿಕೆಯಲ್ಲಿ ತೊಡಗಿದ್ದ ಕರ್ನಾಟಕದಿಂದ ಮೂರು ದೋಣಿಗಳನ್ನು ಜಪ್ತಿ ಮಾಡಿದೆ.
ಮೀನುಗಾರಿಕೆ ಅನುಮತಿ ಮತ್ತು ಸಮಯದ ನಿರ್ಬಂಧಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗಣೇಶ್ ಪ್ರಸನ್ನ, ಏಷ್ಯನ್ ಬ್ಲೂ ಮತ್ತು ಶ್ರೀರಂಗ ಎಂಬ ಬೋಟ್‌ಗಳನ್ನು ಕೇರಳ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೋಟ್‌ಗಳ ಮಾಲೀಕರಿಗೆ ಒಟ್ಟು 7.5 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಯಿತು.
ಕಾಸರಗೋಡು ಜಿಲ್ಲೆಯ ಮೀನುಗಾರಿಕಾ ಉಪನಿರ್ದೇಶಕರಾದ ಕೆ ಎ ಲಬೀಬ್ ಅವರು ಕಾರ್ಯಾಚರಣೆಯ ಕುರಿತು ಮಾಹಿತಿ ನೀಡಿ, ನಿಷೇಧಿತ ರಾತ್ರಿ ಸಮಯದಲ್ಲಿ ಕುಂಬಳೆ ಸಮುದ್ರ ತೀರದ 12 ನಾಟಿಕಲ್ ಮೈಲುಗಳ ವ್ಯಾಪ್ತಿಯಲ್ಲಿ ದೋಣಿಗಳು ಟ್ರಾಲಿಂಗ್ ಕಾರ್ಯಾಚರಣೆ ನಡೆಸುತ್ತಿರುವುದು ಕಂಡುಬಂದಾಗ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.