ಮೈಸೂರು: ಮೈಸೂರು-ಟಿ ನರಸೀಪುರ ರಸ್ತೆಯ ಲಲಿತ್ ಮಹಲ್ ಮೈದಾನ ಪಕ್ಕದಲ್ಲಿರುವ ನಾಡಪ್ರಭು ಕೆಂಪೇಗೌಡ ವೃತ್ತದಲ್ಲಿ ರಾತ್ರೋರಾತ್ರಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಇದರಿಂತ ಸ್ಥಳದಲ್ಲಿ ಶನಿವಾರ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಆಲನಹಳ್ಳಿ ಒಕ್ಕಲಿಗ ಯುವಕರ ಸಂಘದ ಸದಸ್ಯರು ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕೆಂಪೇಗೌಡ ವೃತ್ತದಲ್ಲಿ 10 ಅಡಿಗಿಂತ ಹೆಚ್ಚು ಎತ್ತರದ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ.
ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅನುಮತಿ ಇಲ್ಲದೆ ಪ್ರತಿಮೆ ಇರಿಸಿರುವುದನ್ನು ತೆರವುಗೊಳಿಸಲು ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ಕೆಂಪೇಗೌಡರ ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಮತ್ತು ಅಭಿಮಾನಿಗಳ ನಡುವೆ ವಾಗ್ವಾದ ನಡೆದು, ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ನಗರ ಪಾಲಿಕೆಯಿಂದ ಅನುಮತಿ ಪಡೆಯದೆಯೇ ಏಕಾಏಕಿ ಪ್ರತಿಮೆ ಇರಿಸಿರುವುದು ಸರಿಯಲ್ಲ ಎಂದು ಪೊಲೀಸರು ಹೇಳಿದರು. ಮೂರು ತಿಂಗಳ ಹಿಂದೆಯೇ ಇಲ್ಲಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದ್ದು, ಯಾವುದೇ ಕಾರಣಕ್ಕೂ ತೆರವು ಮಾಡಲು ಬಿಡುವುದಿಲ್ಲ ಎಂದು ಅಭಿಮಾನಿಗಳು ಪಟ್ಟು ಹಿಡಿದರು.
ಬಳಿಕ ಸ್ಥಳಕ್ಕೆ ಶಾಸಕ ಕೆ. ಹರೀಶ್ ಗೌಡ ಧಾವಿಸಿ ಎಂಸಿಸಿಯಿಂದ ಅನುಮತಿ ಪಡೆದು, ಪ್ರತಿಮೆಯನ್ನು ಸ್ಥಾಪಿಸುವ ಭರವಸೆ ನೀಡಿದರು. ಬಳಿಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು.