ವಲಸೆ ಕಾರ್ಮಿಕರಿಂದ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಕಳ್ಳತನಗಳು ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು, ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಬೆಳೆಗಾರರಿಗೆ ತಮ್ಮಲ್ಲಿ ಕೆಲಸಮಾಡುವ ವಲಸೆ ಕಾರ್ಮಿಕರ ವಿವರಗಳನ್ನು ಇಲಾಖೆಗೆ ನೀಡಲು ವಿಫಲವಾದರೆ ಮುಂದೆ ತಮ್ಮ ಕಾರ್ಮಿಕರಿಂದ ನಡೆಯಬಹುದಾದ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡುತ್ತದೆ ಎಂಬದಾಗಿ ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ,
ಆದ್ದರಿಂದ, ಕೊಡಗು ಪ್ಯಾಂಟರ್ಸ್ ಅಸೋಸಿಯೇಷನ್, ಕೊಡಗಿನ ಬೆಳೆಗಾರರು ತಮ್ಮಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರ ವಿವರಗಳನ್ನು ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಸಲ್ಲಿಸಿ ಆ ಮೂಲಕ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿಸುತ್ತಿದೆ.
ಈ ನಿಟ್ಟಿನಲ್ಲಿ ನಿಗದಿತ ನಮೂನೆಯಲ್ಲಿ ಪೊಲೀಸ್ ಇಲಾಖೆಗೆ ಸಲ್ಲಿಸಬೇಕಾದ ವಿವರಗಳೆಂದರೆ , ವಲಸೆ ಕಾರ್ಮಿಕರ ಹೆಸರು ಮತ್ತು ವಿಳಾಸ, ಅವರ ವಿಳಾಸದ ಹತ್ತಿರದ ಪೊಲೀಸ್ ಠಾಣೆ, ಅವರ ಕೆಲಸದ ವಿವರಗಳು, ಕುಟುಂಬದ ಸದಸ್ಯರ ವಿವರಗಳು, ಪ್ರಸ್ತುತ ಮಾಲೀಕರಲ್ಲಿ ಸೇವೆ ಸಲ್ಲಿಸಿದ ಅವಧಿ ಅವರನ್ನು ಪ್ರಸ್ತುತ ಮಾಲೀಕರಿಗೆ ಪರಿಚಯಿಸಿ ಕರೆತಂದ ಮಧ್ಯವರ್ತಿಯ ಹೆಸರು, ಕುಟುಂಬ ಸದಸ್ಯರೊಂದಿಗೆ ಕಾರ್ಮಿಕರ ಫೋಟೋ ಮತ್ತು ಅವರ ಆಧಾರ್ ಕಾರ್ಡ್‌ನ ಪ್ರತಿ,
ಬೆಳೆಗಾರರು ವಿವರಗಳನ್ನು ಸಲ್ಲಿಸಿದಕ್ಕಾಗಿ ತಾವು ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಪಡೆಯಬಹುದು, ಅರ್ಜಿಯ ನಮೂನೆ ಸಿ.ಪಿ.ಎ, ಕಚೇರಿಯಲ್ಲಿ ಲಭ್ಯವಿರುತ್ತದೆ ಎಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ
ಎ.ನಂದ ಬೆಳ್ಳಿಯಪ್ಪ ತಿಳಿಸಿದ್ದಾರೆ.