ಲಡಾಖ್‌: LAC ಬಳಿ ಸೇನೆ ಟ್ಯಾಂಕ್ ಅಪಘಾತ; ನೀರಿನಲ್ಲಿ ಕೊಚ್ಚಿ ಹೋಗಿ ಐವರು ಯೋಧರು ಮೃತ್ಯು

ಲಡಾಖ್: ಕೇಂದ್ರಾಡಳಿತ ಪ್ರದೇಶ ಲಡಾಖ್ ನ ವಾಸ್ತವ ನಿಯಂತ್ರಣ ರೇಖೆ (ಎಲ್ ಎಸಿ) ಬಳಿ ಶನಿವಾರ ದುರ್ಘಟನೆಯೊಂದು ಜರುಗಿದೆ. ಶನಿವಾರ ಮುಂಜಾನೆ ಲಡಾಖ್‌ನ ನ್ಯೋಮಾ-ಚುಶುಲ್ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ ಬಳಿ (ಎಲ್ ಎಸಿ) ಬಳಿ T-72 ಟ್ಯಾಂಕ್ ನಲ್ಲಿ ನದಿಯೊಂದನ್ನು ದಾಟುತ್ತಿದ್ದಾಗ ಹಠಾತ್ ಪ್ರವಾಹ ಉಂಟಾಗಿದ್ದು, ಐವರು ಯೋಧರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲೇಹ್‌ನಿಂದ 148 ಕಿಲೋಮೀಟರ್‌ ದೂರದಲ್ಲಿರುವ ಮಂದಿರ್‌ ಮೋರ್‌ ಬಳಿ ಬೆಳಗ್ಗೆ 1 ಗಂಟೆ ಸುಮಾರಿಗೆ ಟ್ಯಾಂಕ್ ನೊಂದಿಗೆ ನದಿಯನ್ನು ದಾಟುವ ಅಭ್ಯಾಸ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸೇನಾ ಟ್ಯಾಂಕ್ ಅಪಘಾತಕ್ಕೀಡಾಗಿದ್ದು, ನದಿಯ ಆಳವಾದ ಭಾಗವನ್ನು ದಾಟುತ್ತಿದ್ದಾಗ ಸಿಲುಕಿಕೊಂಡಿತ್ತು. ಈ ವೇಳೆ ಏಕಾಏಕಿ ನೀರಿನ ಮಟ್ಟ ಏರಿದ್ದರಿಂದ ಸೈನಿಕರು ಕೊಚ್ಚಿ ಹೋಗಿದ್ದಾರೆ.

ಭಾರತದಲ್ಲಿ 24,00 ಟಿ-72 ಟ್ಯಾಂಕ್‌ಗಳಿವೆ. ಭಾರತೀಯ ಸೇನೆಯು ಈ ಟ್ಯಾಂಕ್‌ಗಳನ್ನು ಬಹಳ ಹಿಂದಿನಿಂದಲೂ ಬಳಸುತ್ತಿದೆ. ಅಪಘಾತದ ಸಮಯದಲ್ಲಿ ಇತರ ಟ್ಯಾಂಕ್‌ಗಳು ಸಹ ಅಲ್ಲಿದ್ದವು. ಎಲ್ಲ ಐದು ಸೈನಿಕರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ ಎಂದು ಸೇನಾ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ. ಹಿಮ ಕರಗುವಿಕೆಯಿಂದಾಗಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿದೆ ಎಂದು ಊಹಿಸಲಾಗಿದೆ. ಶ್ಯೋಕ್ ಸಿಂಧೂ ನದಿಯ ಉಪನದಿಯಾಗಿದೆ.

ಘಟನೆ ಬಗ್ಗೆ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ʼʼಲಡಾಕ್‌ನಲ್ಲಿ ನದಿ ದಾಟುವಾಗ ಸಂಭವಿಸಿದ ಅಪಘಾತದಲ್ಲಿ ನಮ್ಮ ಐವರು ಧೈರ್ಯಶಾಲಿ ಸೈನಿಕರು ಪ್ರಾಣ ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ನಮ್ಮ ಸೈನಿಕರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಈ ದುಃಖದ ಸಮಯದಲ್ಲಿ ರಾಷ್ಟ್ರವು ಅವರೊಂದಿಗೆ ದೃಢವಾಗಿ ನಿಲ್ಲುತ್ತದೆʼʼ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Latest Indian news

Popular Stories