ಜಾರ್ಖಂಡ್: ಭೂ ಹಗರಣ ಕೇಸ್ ನಲ್ಲಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರಿಗೆ ಅಲ್ಲಿನ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ನಕಲಿ ದಾಖಲೆಗಳ ಮೂಲಕ ಹಲವಾರು ಕೋಟಿ ರೂಪಾಯಿ ಮೌಲ್ಯದ ದೊಡ್ಡ ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ದಾಖಲೆಗಳನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜಾರಿ ನಿರ್ದೇಶನಾಲಯ ಸೊರೆನ್ ಅವರನ್ನು ಜನವರಿ 31 ರಂದು ಬಂಧಿಸಿ, ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಲ್ಲಿ ಇರಿಸಿತ್ತು.
ಪ್ರಕರಣದ ತನಿಖೆಯ ಭಾಗವಾಗಿ ಸೋರೆನ್, ಐಎಎಸ್ ಅಧಿಕಾರಿ ಮತ್ತು ರಾಂಚಿಯ ಮಾಜಿ ಜಿಲ್ಲಾಧಿಕಾರಿ ಛವಿ ರಂಜನ್, ಭಾನು ಪ್ರತಾಪ್ ಪ್ರಸಾದ್ ಸೇರಿದಂತೆ 25 ಕ್ಕೂ ಹೆಚ್ಚು ಜನರನ್ನು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಬಂಧನದ ಸಮಯದಲ್ಲಿ, ಸೋರೆನ್ ತನ್ನ ವಿರುದ್ಧದ ಭೂ ಕಬಳಿಕೆ ಆರೋಪವನ್ನು ಬಲವಾಗಿ ನಿರಾಕರಿಸಿದ್ದರು. ರಾಜಕೀಯ ಸೇಡಿನ ಭಾಗವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ವಿರುದ್ಧ ಹಣ ವರ್ಗಾವಣೆ ಪ್ರಕರಣವನ್ನು ಹೂಡಿದೆ ಎಂದು ಹೇಳಿದ್ದರು.
ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೆಲವೇ ನಿಮಿಷಗಳಲ್ಲಿ ಅವರನ್ನು ಜನವರಿ 31 ರಂದು ರಾಂಚಿ ರಾಜಭವನದಿಂದ ಬಂಧಿಸಲಾಗಿತ್ತು.
ಸೊರೆನ್ ಮತ್ತಿತರ 11 ಆರೋಪಿಗಳನ್ನು ರಾಂಚಿಯ ವಿಶೇಷ ನ್ಯಾಯಾಲಯಕ್ಕೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ, ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಹೇಮಂತ್ ಸೊರೆನ್ ಪರ ವಕೀಲರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.