ಬೆಳಗಾವಿ: ಜಿಲ್ಲಾ ಉಸ್ತುವಾರಿ ಸಚಿವ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಯಾವುದೇ ರೀತಿಯ ಶೀತಲ ಸಮರದ ಬಗ್ಗೆ ನನಗೆ ತಿಳಿದಿಲ್ಲ. ನಮ್ಮ ನಡುವೆ ಯಾವುದೇ ವಾರ್ ಇಲ್ಲ. ಈ ಕೋಲ್ಡ್ ವಾರ್, ಹಾಟ್ ವಾರ್ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ.
ಇಬ್ಬರೂ ನಾಯಕರ ನಡುವೆ ಎಂದಿಗೂ ಯಾವುದೇ ಭಿನ್ನಾಭಿಪ್ರಾಯಗಳು ಎದುರಾಗಿಲ್ಲ. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುವುದನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಮಂಗಳವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹೆಬ್ಬಾಳ್ಕರ್, ಕೇವಲ ಸಚಿವೆಯಾಗಿ ಮಾತ್ರವಲ್ಲದೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿಯೂ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ರಾಜ್ಯದಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ ಮಹಿಳಾ ಫಲಾನುಭವಿಗಳಿಗೆ 36,000 ಕೋಟಿ ರೂ.ಗಳನ್ನು ವಿತರಿಸುವ ಕೆಲಸವನ್ನು ನಿರ್ವಹಿಸಿದ್ದೇನೆ ಎಂದು ಅವರು ಹೇಳಿದರು.
ಇತರ ನಾಯಕರೊಂದಿಗೆ ಶೀತಲ ಸಮರದಲ್ಲಿ ಪಾಲ್ಗೊಳ್ಳಲು ನಾನೀಗ ತುಂಬಾ ಬ್ಯುಸಿಯಾಗಿದ್ದೇನೆ. ಹಲವು ಜವಾಬ್ದಾರಿಗಳನ್ನು ಹೊಂದಿರುವ ಸಚಿವೆಯಾಗಿ, ನಾನು ಕೆಲಸದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದೇನೆ ಎಂದು ಹೇಳಿದರು.
ರಾಜ್ಯದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕರು ಪ್ರದರ್ಶಿಸಿದ ಒಗ್ಗಟ್ಟನ್ನು ಸ್ಮರಿಸಿದ ಹೆಬ್ಬಾಳ್ಕರ್, ತಾನು ಮತ್ತು ಜಾರಕಿಹೊಳಿ ಇಬ್ಬರೂ ಪ್ರಚಾರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರಿಂದ ಪಕ್ಷವು ಬೆಳಗಾವಿಯಲ್ಲಿ 11 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದರು.
ಮುಂದಿನ ದಿನಗಳಲ್ಲಿಯೂ ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಅವರ ನೇತೃತ್ವದಲ್ಲೇ ಚುನಾವಣೆ ನಡೆಯಲಿದ್ದು, ಬಿಜೆಪಿ ಜೊತೆಗಿನ ಕಾಂಗ್ರೆಸ್‌ನ ಸ್ಪರ್ಧೆ ಮುಂದುವರಿಯಲಿದೆ. ಮುಂಬರುವ ಲೋಕಸಭೆ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಪಕ್ಷಕ್ಕೆ ಸಹಾಯ ಮಾಡುವುದೇ ನನ್ನ ಗುರಿಯಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಆಡಳಿತ ಪಕ್ಷಗಳ ನಾಯಕರು ಪ್ರತಿಸ್ಪರ್ಧಿಗಳಾಗಿದ್ದಾಗ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯ. ರಾಜಕೀಯ ಜೀವನದಲ್ಲಿ ಪ್ರಬಲ ವಿರೋಧ ಮತ್ತು ಪ್ರತಿಸ್ಪರ್ಧಿಗಳನ್ನು ಹೊಂದಿರುವುದು ಮುಖ್ಯ. ಪ್ರತಿಸ್ಪರ್ಧಿಗಳು ನಿಮ್ಮ ತಪ್ಪುಗಳನ್ನು ಸರಿಪಡಿಸಲು ಸಹಾಯ ಮಾಡುವುದಲ್ಲದೆ, ನಿಮ್ಮನ್ನು ಎಚ್ಚರವಾಗಿಡುತ್ತಾರೆ ಎಂದರು.