ನೂತನ ಸಂಸದರು ಕೊಡಗಿನ ರಸ್ತೆ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಿ | ಬಿಜೆಪಿಯ ಹಿರಿಯ ಮುಖಂಡ ಹೆಚ್. ಎನ್. ರಮೇಶ್ ಸಲಹೆ

ಗೋಣಿಕೊಪ್ಪಲು, ಹಲವು ದಶಕಗಳ ಬೇಡಿಕೆಯಾಗಿರುವ ಕೊಡಗಿನ ರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ನೂತನ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಶೇಷ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿರುವ ಜಿಲ್ಲೆಯ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಹೈಸೊಡ್ಲುರಿನ ಹೊಟ್ಟೇoಗಡ ಎನ್. ರಮೇಶ್, ನಿರೀಕ್ಷೆಗೂ ಮೀರಿ ಮತಗಳನ್ನು ಪಡೆದು ಜಯಗಳಿಸಿರುವ ನೂತನ ಸಂಸದರ ಮೇಲೆ ಕೊಡಗಿನ ಜನತೆ ಬಹುದೊಡ್ಡ ಆಶಾವಾದವನ್ನು ಇರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ರಸ್ತೆ ಸೇರಿದಂತೆ ಕೊಡಗಿನ ಸಮಗ್ರ ರಸ್ತೆ ಅಭಿವೃದ್ಧಿ ಎಂಬುದು ಜಿಲ್ಲೆಯ ಜನರ ಬಹುದೊಡ್ಡ ಬೇಡಿಕೆಯಾಗಿರುತ್ತದೆ. ಇದನ್ನು ಹಲವು ದಶಕಗಳಿಂದ ಜನಪ್ರತಿನಿಧಿಗಳ ಬಳಿ ಮುಂದಿಡುತ್ತಾ ಬಂದಿದ್ದರೂ ಜನರ ನಿರೀಕ್ಷಿತ ಮಟ್ಟದಲ್ಲಿ ಈಡೇರಲಿಲ್ಲ. ಇದೀಗ ನೂತನವಾಗಿ ಆಯ್ಕೆಯಾಗಿರುವ ಸಂಸದರು ಉತ್ಸಾಹಿ ತರುಣರಾಗಿದ್ದು, ಅಭಿವೃದ್ಧಿ ಕೆಲಸಗಳನ್ನು ಮಾಡುವ ಸಮಾಜಮುಖಿ ವ್ಯಕ್ತಿತ್ವದವರಾಗಿದ್ದಾರೆ. ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳು ಬಹಳಷ್ಟು ಹದಗೆಟ್ಟಿದ್ದು, ಹಲವಾರು ವರ್ಷಗಳಿಂದ ಡಾಂಬರು ಕಾಣದ ಬಹಳಷ್ಟು ರಸ್ತೆಗಳಿವೆ. ಇವುಗಳನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಭಿವೃದ್ಧಿಪಡಿಸಲು ಸಂಸದರು ಮೊದಲ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಡಗಿನ ಮತದಾರರು ಬಿಜೆಪಿ ಪಕ್ಷದತ್ತ ಒಲವು ತೋರಿದ್ದಾರೆ. ರಾಜ್ಯ ಸರಕಾರದ ಯಾವುದೇ ಗ್ಯಾರೆಂಟಿ ಯೋಜನೆಗಳಿಗೆ ಮರುಳಾಗದೆ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿದ್ದಾರೆ. ಕೊಡಗಿನ ಜನರ ಮತಗಳೇ ಪಕ್ಷದ ಅಭ್ಯರ್ಥಿಯ ಗೆಲುವಿನ ಅಂತರ ಹೆಚ್ಚಿಸಲು ಕಾರಣವಾಗಿದೆ. ಇದನ್ನು ನೂತನ ಸಂಸದರು ವಿಶೇಷವಾಗಿ ಪರಿಗಣಿಸಿ ಅಭಿವೃದ್ಧಿ ವಿಚಾರದಲ್ಲಿ ಕೊಡಗಿಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು ಎಂದು ಒತ್ತಾಯಿಸಿರುವ ರಮೇಶ್, ಜಿಲ್ಲೆಯ ಪ್ರಸಿದ್ಧ ಅಭಯಾರಣ್ಯವಾಗಿರುವ ನಾಗರಹೊಳೆಗೆ ರಾಜೀವ್ ಗಾಂಧಿಯವರ ಹೆಸರನ್ನು ಇಟ್ಟ ಕಾಂಗ್ರೆಸ್ ಈ ಅಭಯಾರಣ್ಯಕ್ಕೆ ತೆರಳುವ ರಸ್ತೆ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಕಾಳಜಿ ವಹಿಸಲೇ ಇಲ್ಲ. ಅರಣ್ಯ ಇಲಾಖೆಯ ಕಾನೂನು ತೊಡಕುಗಳನ್ನು ನಿವಾರಿಸಿ ಈ ರಸ್ತೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಹೇಳಿದ್ದಾರೆ.

ಕಳೆದ ಹತ್ತು ವರ್ಷಗಳ ಕಾಲ ಸಂಸದರಾಗಿದ್ದ ಪ್ರತಾಪ್ ಸಿಂಹ ಕೊಡಗಿನ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಇವರ ಅವಧಿಯಲ್ಲಿ ಕೊಡಗಿಗೆ ಯಾವುದೇ ಬಹುಜನೋಪಯೋಗಿ ಯೋಜನೆಗಳು ಜಾರಿಯಾಗಲಿಲ್ಲ. ಕೊಡಗಿನ ಜನರಿಗೆ ಹೆಚ್ಚು ಉಪಯೋಗವಾಗುತ್ತಿದ್ದ ಬಿಎಸ್ಎನ್ಎಲ್ ಜಿಲ್ಲೆಯಲ್ಲಿ ಸಂಪೂರ್ವಾಗಿ ನೆಲಕಚ್ಚುವಂತಾಯಿತು. ಕೇವಲ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಗೆದ್ದ ಪ್ರತಾಪ್ ಸಿಂಹ ಅಭಿವೃದ್ಧಿ ವಿಚಾರದಲ್ಲಿ ಕೊಡಗನ್ನು ಸಂಪೂರ್ಣವಾಗಿ ಕಡೆಗಣಿಸಿದರು ಎಂದು ತೀವ್ರ ಅಸಮಾಧಾನ ಹೊರ ಹಾಕಿದ ಎಚ್.ಎನ್. ರಮೇಶ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ ಒಂದು ಕ್ಷೇತ್ರವನ್ನು ಮಾತ್ರ ಬಿಜೆಪಿ ಗೆಲ್ಲುವಂತಾಯಿತು. ಇದು ಪ್ರತಾಪ್ ಸಿಂಹ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿತ್ತು. ಇದೆಲ್ಲವನ್ನು ಪರಿಗಣಿಸಿಯೇ ಪ್ರತಾಪ್ ಸಿಂಹ ಅವರಿಗೆ ಕಳೆದ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಲಾಯಿತು ಎಂದು ವಿಶ್ಲೇಷಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎರಡೂ ಸ್ಥಾನಗಳಲ್ಲಿ ಬಿಜೆಪಿ ಸೋತಿದ್ದು ತೀವ್ರ ಬೇಸರ ಮೂಡಿಸಿದೆ. ಪಕ್ಷದ ಮುಖಂಡರ ನಿರ್ಲಕ್ಷದ ಪರಿಣಾಮವಾಗಿ, ತೀವ್ರ ಸಂಕಷ್ಟದ ಸಂದರ್ಭಗಳಲ್ಲೂ ಕೊಡಗಿನಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದ ಅಪ್ಪಚ್ಚು ರಂಜನ್ ಮತ್ತು ಕೆ. ಜಿ. ಬೋಪಯ್ಯ ಅವರ ಸೇವೆಯನ್ನು ಜಿಲ್ಲೆಯ ಜನತೆ ಕಳೆದುಕೊಳ್ಳುವಂತಾಯಿತು. ಜನಪ್ರಿಯ ಶಾಸಕರಾಗಿದ್ದ ಕೆ. ಜಿ. ಬೋಪಯ್ಯ ವಿರುದ್ಧ ಕೆಲವರು ನಿರಂತರವಾಗಿ ಮಾಡುತ್ತಿದ್ದ ಅಪಪ್ರಚಾರಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಲು ಬಿಜೆಪಿ ಪಕ್ಷ ಮತ್ತು ಮುಖಂಡರು ವಿಫಲರಾಗಿದ್ದರು. ಇದು ಅವರ ಸೋಲಿಗೆ ಒಂದು ಕಾರಣವಾದರೆ, ಕಾಂಗ್ರೆಸ್ ಅಭ್ಯರ್ಥಿಯ ಮತ ಖರೀದಿ ಮತ್ತೊಂದು ಕಾರಣ ಎಂದು ಹೇಳಿದರು.

ಇದೀಗ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಚೇತರಿಸಿಕೊಂಡಿದೆ. ಈ ಗೆಲುವಿನಿಂದಾಗಿ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದೆ. ಇದನ್ನು ಪಕ್ಷದ ನಾಯಕರು ಸಮರ್ಥವಾಗಿ ಬಳಸಿಕೊಳ್ಳಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನಲ್ಲಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ಕಾಂಗ್ರೆಸಿಗರ ಹಣ ಬಲದ ರಾಜಕೀಯ ಇನ್ನು ಜಿಲ್ಲೆಯಲ್ಲಿ ನಡೆಯುವುದಿಲ್ಲ. ಆದರೆ ಎರಡೂ ಕ್ಷೇತ್ರಗಳಲ್ಲಿ ಸಮರ್ಥ ನಾಯಕರನ್ನು ಈಗಿನಿಂದಲೇ ಕಣಕ್ಕಿಳಿಸಿ ತಯಾರು ಮಾಡಬೇಕು ಎಂದು ರಮೇಶ್ ಅವರು ಸಲಹೆ ನೀಡಿದ್ದಾರೆ.

Latest Indian news

Popular Stories