ಲೋಕಸಭಾ ಚುನಾವಣೆ ಗೆಲುವು ಅನಿರೀಕ್ಷಿತ, ಇದು ಬೆಳಗಾವಿ ಜನರ ಗೆಲುವು: ಜಗದೀಶ್ ಶೆಟ್ಟರ್

ಬೆಳಗಾವಿ: 1.5 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತನೆಂದು ನಿರೀಕ್ಷಿಸಿರಲಿಲ್ಲ. ಇದು ಬೆಳಗಾವಿ ಜನತೆಯ ಗೆಲುವು ಎಂದು ಬೆಳಗಾವಿಯಿಂದ ನೂತನವಾಗಿ ಆಯ್ಕೆಯಾಗಿರುವ ಸಂಸದ ಜಗದೀಶ ಶೆಟ್ಟರ್ ಅವರು ಗುರುವಾರ ಹೇಳಿದರು.

ಸಂಸದರಾದ ಬಳಿಕ ಬೆಳಗಾವಿಯಲ್ಲಿ ಮೊದಲ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬಿಜೆಪಿಯ ಮಾಜಿ ಸಂಸದ ದಿವಂಗತ ಸುರೇಶ ಅಂಗಡಿ ಅವರು ನಾಲ್ಕು ಬಾರಿ ಅಧಿಕಾರದಲ್ಲಿದ್ದಾಗ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಮತ್ತು ಬೆಳಗಾವಿ ಲೋಕಸಭೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಮಾಡಿದ ಪ್ರಯತ್ನಗಳು ನನ್ನ ಗೆಲುವಿಗೆ ಕಾರಣವಾಗಿವೆ. ಬೆಳಗಾವಿ ದಕ್ಷಿಣ ವಿಧಾನಸಭಾ ಭಾಗದಲ್ಲಿ 73,000 ಮತಗಳು, ಬೆಳಗಾವಿ ಗ್ರಾಮಾಂತರ ವಿಧಾನಸಭಾ ಭಾಗದಲ್ಲಿ ಸುಮಾರು 50,500 ಮತಗಳನ್ನು ಬಂದಿವೆ. ಇದಕ್ಕೆ ಬಿಜೆಪಿ ಕಾರ್ಯಕರ್ತರ ಶ್ರಮ ಕಾರಣ ಎಂದು ಶ್ಲಾಘಿಸಿದರು.

ಪ್ರಚಾರದುದ್ದಕ್ಕೂ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಶ್ರಮಿಸಿದರು. ರಾಷ್ಟ್ರೀಯ ಸಮಸ್ಯೆಗಳು ಮತ್ತು ನಾಯಕತ್ವದ ಆಧಾರದ ಮೇಲೆ ಸಂಸತ್ ಚುನಾವಣೆಯನ್ನು ಎದುರಿಸಲಾಗಿದೆ. ಕಳೆದ ಒಂದು ದಶಕದಲ್ಲಿ ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ದೇಶಕ್ಕಾಗಿ ಅವರ ಮಾರ್ಗಸೂಚಿಯು ಸಹ ಜನರು ಮತಹಾಕುವಂತೆ ಮಾಡಿದೆ ಎಂದು ಹೇಳಿದರು.

ಇತರ ರಾಜಕೀಯ ಪಕ್ಷಗಳ ನಾಯಕರು ಕೂಡ ಬೆಳಗಾವಿಯಲ್ಲಿ ಬಿಜೆಪಿಗೆ ಸಹಾಯ ಮಾಡಿದ್ದಾರೆ ಎಂಬ ವದಂತಿಗಳ ಕುರಿತು ಮಾತನಾಡಿ, ಪರೋಕ್ಷವಾಗಿ ಕ್ಷೇತ್ರವನ್ನು ಗೆಲ್ಲಲು ಸಹಾಯ ಮಾಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆಂದು ತಿಳಿಸಿದರು. ಆದರೆ, ತಮಗೆ ಪರೋಕ್ಷವಾಗಿ ಬೆಂಬಲ ನೀಡಿದ ಯಾವುದೇ ನಾಯಕರ ಹೆಸರನ್ನು ಬಹಿರಂಗಪಡಿಸಲಿಲ್ಲ.

ಇದೇ ವೇಳೆ ಮಾರ್ಚ್ 27 ರಂದು ಬೆಳಗಾವಿ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕ್ಷೇತ್ರಕ್ಕೆ ಆಗಮಿಸಿದಾಗ ಬೆಳಗಾವಿಯ ಜನರು ಮತ್ತು ಪಕ್ಷದ ಕಾರ್ಯಕರ್ತರು ತಮ್ಮನ್ನು ಹೇಗೆ ಸ್ವಾಗತಿಸಿದರು ಎಂಬುದನ್ನು ಸ್ಮರಿಸಿದರು. ನಾಮಪತ್ರ ಸಲ್ಲಿಸಲು ಹೋದಾಗ ಅಪಾರ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದನ್ನು ನೆನಪಿಸಿಕೊಂಡರು.

ನಿಮ್ಮ ಹಳೆ ಸ್ನೇಹಿತ ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆ ತರುತ್ತಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಸವದಿ ಅವರು ನಮ್ಮ ಸಂಪಕರ್ದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷದ ಒಳಜಗಳ ಅವರ ಹಣೆಬರಹ. ನಾವು ಯಾಕೆ ಅದರ ಬಗ್ಗೆ ಚಿಂತೆ ಮಾಡೋದು ಎಂದು ಲೇವಡಿ ಮಾಡಿದ ಶೆಟ್ಟರ್, ಇಷ್ಟು ದೊಡ್ಡ ಅಂತರದಲ್ಲಿ ಗೆದ್ದಿದ್ದೇನೆ. ಹಾಗಾಗಿ, ಸೋಲಿಸಲು ಪ್ರಯತ್ನಿಸಿದವರ ಬಗ್ಗೆ ಮಾತಾಡೋದಿಲ್ಲ ಎಂದು ಉತ್ತರಿಸಿದರು.

ಮಹದಾಯಿ ಕಳಸಾ ಬಂಡೂರಿ ಯೋಜನೆ ಸಂಬಂಧ ಈಗಾಗಲೇ ರಾಜ್ಯಕ್ಕೆ 13 ಟಿಎಂಸಿ ನೀರು ಸಿಕ್ಕಿದೆ. ಅಲ್ಲದೇ ಕೇಂದ್ರ ಸರ್ಕಾರ ಅನುಮತಿ ಕೂಡ ನೀಡಿದೆ. ಪರಿಸರ ಮತ್ತು ಅರಣ್ಯ ಇಲಾಖೆ, ವನ್ಯಜೀವಿ ಮಂಡಳಿಯಲ್ಲಿ ಬಾಕಿಯಿದೆ. ಹಾಗಾಗಿ, ಸಂಬಂಧಿಸಿದ ಸಚಿವರನ್ನು ನಾನೇ ಖುದ್ದಾಗಿ ಭೇಟಿಯಾಗುತ್ತೇನೆ. ಅಲ್ಲದೇ ವನ್ಯಜೀವಿ ಮಂಡಳಿಯವರ ಜೊತೆಗೂ ಸಮಾಲೋಚಿಸುತ್ತೇನೆ. ಅದೇ ರೀತಿ ಗೋವಾ ಸಿಎಂ ಜೊತೆ ಮಾತುಕತೆಗೂ ಪ್ರಯತ್ನಿಸುತ್ತೇನೆ. ಅದು ಆಗದಿದ್ದರೆ, ಕಾನೂನು ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆಗೆ ಕ್ಲಿಯರನ್ಸ್ ಪಡೆಯಲು ಪ್ರಯತ್ನಿಸುತ್ತೇನೆ ಎಂದು ಶೆಟ್ಟರ್​ ಇದೇ ಸಂದರ್ಭದಲ್ಲಿ ಹೇಳಿದರು‌

Latest Indian news

Popular Stories