ಲೋಕಸಭಾ ಚುನಾವಣೆ: ಯುಪಿಯಲ್ಲಿ INDIA ಮೈತ್ರಿಕೂಟ 50 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ- ರಾಹುಲ್ ಗಾಂಧಿ

ಲಖನೌ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ INDIA ಮೈತ್ರಿಕೂಟ ವಿಜಯದತ್ತ ದಾಪುಗಾಲು ಹಾಕುವುದನ್ನು ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯುವುದನ್ನು ನೋಡಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಶುಕ್ರವಾರ ಕನೌಜ್ ಮತ್ತು ಕಾನ್ಪುರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಫಲಿತಾಂಶ ಆಡಳಿತಾರೂಢ ಮೈತ್ರಿಕೂಟಕ್ಕೆ ದೊಡ್ಡ ಆಘಾತವನ್ನು ನೀಡುತ್ತದೆ. ವಿಪಕ್ಷಗಳ ಮೈತ್ರಿಕೂಟವಾಗಿರುವ INDIA 50ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದರು. ಏನೆಲ್ಲಾ ಕೆಲಸ ಮಾಡಬೇಕಿತ್ತೋ ಅದೆಲ್ಲಾವನ್ನೂ ಈಗಾಗಲೇ ಮಾಡಿದ್ದೇವೆ. ಯುಪಿಯಲ್ಲಿ 50ಕ್ಕಿಂತಲೂ ಕಡಿಮೆಯಿಲ್ಲದೆ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಅಂಬಾನಿ- ಅದಾನಿ ಮಾತನಾಡುವುದನ್ನು ನಿಲ್ಲಿಸಿರುವ ರಾಹುಲ್ ಗಾಂಧಿ ಟೆಂಪೋದಲ್ಲಿ ಹಣ ಪಡೆದಿರಬಹುದು ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ವೈಯಕ್ತಿಕ ಅನುಭವದಿಂದ ಪ್ರಧಾನಿ ಈ ರೀತಿ ಹೇಳಿರಬಹುದು ಎಂದರು. ಕಳೆದ ಹತ್ತು ವರ್ಷಗಳಲ್ಲಿ ಇಬ್ಬರು ಕಾರ್ಪೊರೇಟ್ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿದ ಪ್ರಧಾನಿ, ಚುನಾವಣೆಯಲ್ಲಿ ಸೋಲಿನಿಂದ ರಕ್ಷಿಸಲು ಅವರ ಬೆಂಬಲ ಕೋರಲು ಇದ್ದಕ್ಕಿದ್ದಂತೆ ತಮ್ಮ ಭಾಷಣದಲ್ಲಿ ಅವರ ಹೆಸರನ್ನು ಬಳಸುತ್ತಿದ್ದಾರೆ ಎಂದರು.

ಪ್ರಧಾನಿ ಬೀಸಿದ ಬಲೆಗೆ ಬೀಳದಂತೆ ಜನರನ್ನು ಎಚ್ಚರಿಸಿದ ರಾಹುಲ್ ಗಾಂಧಿ, ಮುಂದಿನ 10-15 ದಿನಗಳಲ್ಲಿ ವಿವಿಧ ಮಾರ್ಗಗಳ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಪ್ರಯತ್ನಿಸಲಿದೆ ”ನಾವು ಇಂದು ವಿಷಯಾಂತರಗೊಳ್ಳಬಾರದು. ಬಡವರು, ವಂಚಿತರಿಗೆ ಅಧಿಕಾರ ಖಾತ್ರಿಪಡಿಸುವ ಸಂವಿಧಾನವನ್ನು ಉಳಿಸುವುದು ಅತ್ಯಂತ ಪ್ರಮುಖ ವಿಷಯವಾಗಿದೆ ಎಂದು ಅವರು ಹೇಳಿದರು.

Latest Indian news

Popular Stories